ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಾಯು ಮಾಲಿನ್ಯದಿಂದ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿ ಹೋಗಿದ್ದು, ಸತತ 4ನೇ ದಿನವೂ ಗಾಳಿಯ ಗುಣಮಟ್ಟ ವಿಪರೀತವಾಗಿ ಹಾಳಾಗಿದೆ. ಪರಿಣಾಮ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಿದೆ. ಮಾಸ್ಕ್ ಧರಿಸಿ., ವಾಕಿಂಗ್ ಮಾಡ್ಬೇಡಿ., ಉಗುರುಬೆಚ್ಚಗಿನ ನೀರು ಕುಡೀರಿ ಎಂದು ವೈದ್ಯರು ಸೂಚಿಸಿದ್ದಾರೆ.
ಇತ್ತ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದಿಂದ ಮೂರನೇ ಹಂತದ ಕ್ರಮ ಜಾರಿಗೊಳಿಸಿದ್ದು, BS 3 ಪೆಟ್ರೋಲ್, BS IV ಡೀಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿದೆ. ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ಅಂತಾರಾಜ್ಯ ಬಸ್ಗಳನ್ನು ಸಹ ಪರಿಶೀಲಿಸಲಾಗುತ್ತಿದೆ.ಇದರ ನಡುವೆ ನಿಯಮವನ್ನು ಗಾಳಿಗೆ ತೂರಿದವರಿಗೆ ಅಧಿಕಾರಿಗಳು ದಂಡದ ಬಿಸಿ ಮುಟ್ಟಿಸಿದ್ದಾರೆ.
ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಸುಮಾರು 550 ಚಲನ್ ವಿಧಿಸಿದ್ದು, 1 ಕೋಟಿ ರೂ.ಗಿಂತಲೂ ಅಧಿಕ ದಂಡ ವಿಧಿಸಲಾಗಿದೆ. ಇದರೊಂದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಹೊಂದಿರದಿದ್ದಕ್ಕಾಗಿ 4,855 ವಾಹನಗಳಿಗೆ ಚಲನ್ ನೀಡಿದ್ದು, ಒಟ್ಟು 4.8 ಕೋಟಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನ್ಯ ಮಾಲಿನ್ಯ ನಿಯಂತ್ರಣ (PUC) ಪ್ರಮಾಣಪತ್ರ ಹೊಂದಿರದ ವಾಹನ ಚಾಲಕರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಹಾಗಾಗಿ ನಗರದ ಪೂರ್ವ, ಮಧ್ಯ ಮತ್ತು ಉತ್ತರ ವ್ಯಾಪ್ತಿಯಲ್ಲಿ BS-III ಪೆಟ್ರೋಲ್ ಮತ್ತು BS-IV ಡೀಸೇಲ್ ವಾಹನಗಳಿಗೆ ಒಟ್ಟು 293 ಚಲನ್, ಪಿಯುಸಿಸಿ ಸರ್ಟಿಫಿಕೇಟ್ ಇಲ್ಲದ ಕಾರಣಕ್ಕೆ ಒಟ್ಟು 2,404 ಚಲನ್ಗಳನ್ನು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
GRAP -III ನಿಯಮ ಉಲ್ಲಂಘಿಸಿದವರ ವಿರುದ್ಧ ದೆಹಲಿ ವ್ಯಾಪ್ತಿಯಲ್ಲಿ 63 ಚಲನ್, ಪಶ್ಚಿಮ ವಲಯದಲ್ಲಿ 73 ಮತ್ತು ದಕ್ಷಿಣ ವಲಯದಲ್ಲಿ 121 ಚಲನ್, ನವದೆಹಲಿ, ದಕ್ಷಿಣ ಮತ್ತು ಪಶ್ಚಿಮ ಶ್ರೇಣಿಗಳು ಪಿಯುಸಿಸಿ ಹೊಂದಿಲ್ಲದ ಕಾರಣ ಕ್ರಮವಾಗಿ 322, 894 ಮತ್ತು 1,235 ಚಲನ್ಗಳನ್ನು ವಿತರಿಸಲಾಗಿದೆ. ಸಂಚಾರ ಪೊಲೀಸರ ಮೂರು ವ್ಯಾಪ್ತಿಯಲ್ಲಿ ಶುಕ್ರವಾರ ಸುಮಾರು 3,000 ವಾಹನಗಳ ತಪಾಸಣೆ ನಡೆಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ) ರಾಜೀವ್ ಕುಮಾರ್ ರಾವಲ್ ತಿಳಿಸಿದ್ದಾರೆ.