ಹೊಸ ದಿಗಂತ ವರದಿ, ಪುತ್ತೂರು:
ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಕ್ಷೇತ್ರವನ್ನು ಕೇಂದ್ರೀಕರಿಸಿ ಯೂ ಟ್ಯೂಬರ್ ಸಮೀರ್ ಅಹ್ಮದ್ ಮಾಡಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆ ಎಲ್ಲಾ ಎಸ್ಪಿಗಳಿಗೆ ಅಲರ್ಟ್ ಆಗಿರುವ ಸೂಚನೆ ನೀಡಿದೆ. ಇದೀಗ ಇದರ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಸಮೀರ್ ವಿರುದ್ಧ ಕೆಂಡಕಾರಿದೆ.
ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಎಂ. ಪೂವಪ್ಪ ಮಾತನಾಡಿ, ಹಿಂದು ದೇವಸ್ಥಾನಗಳ ಬಗ್ಗೆ ಮಾತುನಾಡುವ ಅಧಿಕಾರ ಸಮೀರ್ ಎನ್ನುವ ಯೂಟ್ಯೂಬರ್ ಗೆ ಇಲ್ಲ. ಧಾರ್ಮಿಕ ಕೇಂದ್ರಗಳಲ್ಲಿ ತಪ್ಪಾಗಿದ್ದರೆ ಅದನ್ನು ತಿದ್ದಲು ವಿಶ್ವ ಹಿಂದೂ ಪರಿಷತ್ ಇದೆ. ಇದನ್ನ ಅಖಿಲ ಭಾರತ ಮಟ್ಟದಿಂದ ವಿಎಚ್ ಪಿ ಒಗ್ಗೂಡಿ ಕೆಲಸ ಮಾಡುತ್ತಿದೆ. ವೀರೇಂದ್ರ ಹೆಗ್ಗಡೆ ತಪ್ಪು ಮಾಡಿದ್ದರೆ ವಿಎಚ್ ಪಿ ಅವರನ್ನು ಪ್ರಶ್ನಿಸುತ್ತದೆ. ಇನ್ನು ಅನ್ಯಾಯಕ್ಕೊಳಗಾದ ಸೌಜನ್ಯಳ ನ್ಯಾಯಕ್ಕಾಗಿ ವಿಶ್ವ ಹಿಂದೂ ಪರಿಷತ್ ಮೊದಲಿನಿಂದಲೂ ಹೋರಾಟ ಮಾಡುತ್ತಿದೆ. ಈಗಲೂ ನ್ಯಾಯಕ್ಕಾಗಿ ಒತ್ತಾಯಿಸುತ್ತದೆ ಎಂದರು.
ಸಮೀರ್ ಎನ್ನುವ ಯೂ ಟ್ಯೂಬರ್ ಹಿಂದು ಧಾರ್ಮಿಕ ಕೇಂದ್ರಗಳ ವಿರುದ್ಧ ವೀಡಿಯೋ ಮಾಡಿ ಅಧಿಕ ಪ್ರಸಂಗಿತನ ತೋರಿಸಿದ್ದಾನೆ. ಆತ ತನ್ನ ತಪ್ಪನ್ನ ತಿದ್ದಿಕೊಳ್ಳದೇ ಇದ್ದಲ್ಲಿ ವಿಶ್ವ ಹಿಂದೂ ಪರಿಷತ್ ಅಖಿಲ ಭಾರತ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಕಿಡಿಕಾರಿದ್ದಾರೆ.
ಹಿಂದು ದೇವಸ್ಥಾನಗಳನ್ನ ಸರ್ಕಾರದ ಹಿಡಿತದಿಂದ ತಪ್ಪಿಸಲು ವಿಎಚ್ ಪಿ ಕಾರ್ಯಪ್ರವೃತ್ತವಾಗಿದೆ. ಇಡೀ ದೇಶ ಮಟ್ಟದಲ್ಲಿ ಈ ಕಾರ್ಯ ನಡೆಯುತ್ತಿದೆ. ಈ ನಡುವೆ ದೇವಾಲಯಗಳನ್ನು ಸರ್ಕಾರದ ಸುಪರ್ದಿಗೆ ನೀಡುವ ಹೇಳಿಕೆಗಳನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ. ಸಮೀರ್ ಅಹಮ್ಮದ್ ತನ್ನ ತಪ್ಪನ್ನು ತಿದ್ದಿಲ್ಲ ಎಂದಾದರೇ ವಿಎಚ್ ಪಿಗೆ ಮುಂದೆ ಏನೂ ಮಾಡಬೇಕು ಅನ್ನೋದು ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಯೂಟ್ಯೂಬರ್ ಸಮೀರ್ ಹಿಂದು ಮುಸಲಾನ್ಮರ ನಡುವೆ ಸಂಘರ್ಷಕ್ಕೆ ಕಾರಣವಾಗುವುದು ಬೇಡ. ಎಲ್ಲಿಂದಲೂ ದೂರದಿಂದ ಕೂತು ವೀಡಿಯೋ ಮಾಡಿ ಬಿಟ್ಟರೆ ದೊಡ್ಡ ಜನ ಅಂತ ತಿಳ್ಕೊಬೇಡ. ಅಪ್ಪಿತಪ್ಪಿಯೂ ಸಮೀರ್ ಪುತ್ತೂರಿಗೆ ಬರಬೇಡ, ಬಂದ್ರೆ ಪರಿಣಾಮ ನೆಟ್ಟಗಿರಿಲ್ಲ ಎಂದು ಎಂ.ಪೂವಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಪ್ರಮುಖರಾದ ಭಾಸ್ಕರ್ ಧರ್ಮಸ್ಥಳ, ಡಾ. ಕೃಷ್ಣ ಪ್ರಸನ್ನ, ಮಾಧವ ಪೂಜಾರಿ ಉಪಸ್ಥಿತರಿದ್ದರು.