September 4, 2026
Friday, September 4, 2026
spot_img

ಪೆರುವಿನಲ್ಲಿ ಪ್ರಕೃತಿ ವಿಕೋಪ: 5.1 ತೀವ್ರತೆಯ ಭೂಕಂಪಕ್ಕೆ ನೂರಾರು ಮನೆಗಳು ಧ್ವಂಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಅಮೆರಿಕದ ಸುಂದರ ರಾಷ್ಟ್ರ ಪೆರುವಿನ ಮಧ್ಯ ಜುನಿನ್ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಅವಳಿ ಭೂಕಂಪಗಳು ಭಾರಿ ವಿನಾಶವನ್ನು ಸೃಷ್ಟಿಸಿವೆ. ಈ ನೈಸರ್ಗಿಕ ವಿಕೋಪದಲ್ಲಿ ಕನಿಷ್ಠ 6 ಜನರು ದುರಂತ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲು

ಪೆರುವಿನ ರಾಜಧಾನಿ ಲಿಮಾದಿಂದ ಪೂರ್ವಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಹುವಾನ್‌ಕಾಯೊ ಪ್ರಾಂತ್ಯದ ಸಿಕಾಯಾ ನಗರದ ಬಳಿ ಈ ಪ್ರಬಲ ಕಂಪನ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ವರದಿಯ ಪ್ರಕಾರ, ರಾತ್ರಿ 9.24 ಕ್ಕೆ ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಮೊದಲು 5.1 ತೀವ್ರತೆ ಹಾಗೂ ನಂತರ 3.7 ತೀವ್ರತೆಯ ಅವಳಿ ಭೂಕಂಪಗಳು ದಾಖಲಾಗಿವೆ.

ನೆಲಸಮವಾದ ಮಣ್ಣಿನ ಮನೆಗಳು: ಬೀದಿಗೆ ಬಿದ್ದ ಜನ

ಪೆರುವಿನ ಆಂಡಿಸ್ ಪರ್ವತ ಸರಣಿಯ ಹಳ್ಳಿಗಳಲ್ಲಿ ಬಹುತೇಕ ಮನೆಗಳನ್ನು ಒಣಗಿದ ಮಣ್ಣಿನ ಇಟ್ಟಿಗೆಗಳಿಂದ (Adobe Bricks) ನಿರ್ಮಿಸಲಾಗಿತ್ತು. ಇವು ಭೂಕಂಪದ ತೀವ್ರ ತರಂಗಗಳನ್ನು ತಡೆಯಲಾರದೆ ತಕ್ಷಣವೇ ಕುಸಿದು ಬಿದ್ದಿವೆ. ಪ್ರಾಥಮಿಕ ವರದಿಗಳ ಪ್ರಕಾರ, 48 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, 18 ಕ್ಕೂ ಹೆಚ್ಚು ಕಟ್ಟಡಗಳು ಜರ್ಜರಿತವಾಗಿವೆ. ನೂರಾರು ಮನೆಗಳು ಉರುಳಿ ಬಿದ್ದ ಪರಿಣಾಮ 200 ಕ್ಕೂ ಹೆಚ್ಚು ಜನರು ಪ್ರಸ್ತುತ ಆಶ್ರಯ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !