EYE CARE| ಕಣ್ಣಿನ ಅಂದ ಹೆಚ್ಚಿಸಲು ನ್ಯಾಚುರಲ್ ಟಿಪ್ಸ್…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಖದ ಅಂದವನ್ನು ಹೆಚ್ಚಿಸುವಲ್ಲಿ ಕಣ್ಣು ಕೂಡಾ ಮಹತ್ವದ ಪಾತ್ರ ವಹಿಸುತ್ತದೆ. ಕಣ್ಣಿನ ಸೌಂದರ್ಯದಲ್ಲಿ ಕಣ್ಣಿನ ರೆಪ್ಪೆಗಳು, ಕಣ್ಣಿನ ಸುತ್ತವಿರುವ ಬಣ್ಣಗಳು ಪ್ರಮುಖವಾಗಿರುತ್ತದೆ. ಕಣ್ಣಿನ ಸೌಂದರ್ಯ ಹೆಚ್ಚಿಸಲು ನೀವು ರಾಸಾಯನಿಕ ಬೆರೆಸಿದ ಕ್ರೀಮ್ ಗಳನ್ನೇ ಬಳಸಬೇಕಿಲ್ಲ. ನೈಸರ್ಗಿಕವಾಗಿ ಸಿಗುವ ಈ ಕೆಲವು ವಸ್ತುಗಳಿಂದಲೂ ನೀವು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಈಗಿನ ಜೀವನಶೈಲಿಯಿಂದ  ಖಿನ್ನತೆ, ನಿದ್ರಾಹೀನತೆ, ಒತ್ತಡ, ಪೋಷಕಾಂಶದ ಕೊರತೆ, ಅಸಮತೋಲಿತ ಡಯೆಟ್, ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ, ಅತಿಯಾದ ಮಾದಕ ವಸ್ತುಗಳ ಸೇವನೆಯಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳಾಗುತ್ತವೆ. ಇದರಿಂದ ಕಣ್ಣಿನ ಸೌಂದರ್ಯವನ್ನು ಮರೆಮಾಚುತ್ತದೆ. ಹೀಗೆ ಆಗದಂತೆ ತಡೆಯಲು ಕೆಲವು ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ.

ಹೀಗೆ ಮಾಡಿ…

ಕಣ್ಣುಗಳಿಗೆ ವಿಶ್ರಾಂತಿ ನೀಡಿ: ಮುಖ ಹೊಳೆಯಲು ವಿಶ್ರಾಂತಿ ಬೇಕು. ಹಾಗೆಯೇ ಕಣ್ಣುಗಳಿಗೂ ವಿಶ್ರಾಂತಿ ಬೇಕು. ಕಣ್ಣುಗಳ ಸೌಂದರ್ಯ ಕಾಪಾಡಲು ಮತ್ತು ಅವುಗಳ ಆಳ ಕಾಪಾಡಿಕೊಳ್ಳಲು, ನೀವು ಸಾಕಷ್ಟು ನಿದ್ರೆ ಮಾಡುವುದು ಮುಖ್ಯ. ಕನಿಷ್ಠ ಏಳರಿಂದ ಎಂಟು ಗಂಟೆಗಳ ನಿದ್ದೆ ನಿಮ್ಮ ಕಣ್ಣುಗಳ ಆರೈಕೆಗೆ ಸಹಾಯ ಮಾಡುತ್ತದೆ.

ಶಿಯಾ ಬಟರ್ ಉಪಯೋಗಿಸಿ ನೋಡಿ: ಇದರಲ್ಲಿರುವ ವಿಟಮಿನ್-ಎ ಮತ್ತು ವಿಟಮಿನ್-ಇ ಅಂಶ ಕಣ್ಣಿನ ಸುತ್ತವಿರುವ ಕಪ್ಪು ಕಲೆಗಳನ್ನು ತೆಗೆದುಹಾಕುದಲ್ಲದೆ, ರೆಪ್ಪೆಗೂದಲು ಬೆಳೆಯಲು ಸಹಾಯ ಮಾಡುತ್ತದೆ. ಇದು ಕಣ್ಣುಗಳನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಗ್ರೀನ್ ಟೀ ಬ್ಯಾಗ್‌ಗಳನ್ನು ಬಳಸಿ: ಫ್ರಿಜ್‌ನಲ್ಲಿರಿಸಿದ ತಣ್ಣನೆಯ ಟೀ ಬ್ಯಾಗ್‌ಗಳನ್ನು ಕಣ್ಣುಗಳ ಮೇಲೆ ಇರಿಸಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ. ಹೀಗೆ ಮಾಡುವುದರಿಂದ ಕಣ್ಣುಗಳ ಜೊತೆಗೆ ಸುತ್ತಲಿನ ತ್ವಚೆಗೂ ಪರಿಹಾರ ಸಿಗುತ್ತದೆ. ದಿನವಿಡೀ ಕಷ್ಟಪಟ್ಟು ಕಣ್ಣುಗಳು ದಣಿದಿದ್ದರೆ, ಟೀ ಬ್ಯಾಗ್‌ಗಳು ಆ ದಣಿವನ್ನು ಹೋಗಲಾಡಿಸುತ್ತದೆ. ಇಲ್ಲಿ ಎಳೆ ಮುಳ್ಳು ಸೌತೆಕಾಯಿಯನ್ನು ಬಳಸಬಹುದು.

ಒಂದು ಟೀ ಸ್ಪೂನ್ ಟೊಮಾಟೋ ಜ್ಯೂಸ್, ಅರ್ಧ ಸ್ಪೂನ್ ನಿಂಬೆ ರಸ, ಸ್ವಲ್ಪ ಅರಿಶಿಣ ಪೌಡರ್, ಸ್ವಲ್ಪ ಕಡ್ಲೆ ಹಿಟ್ಟು ಬಳಸಿ ಪೇಸ್ಟ್ ಮಾಡಿ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಹಾಗೇ ಬಿಟ್ಟು ತೊಳೆದುಕೊಳ್ಳಿ.

ಸಾಕಷ್ಟು ನೀರು ಕುಡಿಯಿರಿ. ಪುದೀನಾ, ನಿಂಬೆ ರಸ, ಟೊಮ್ಯಾಟೋ ಜ್ಯೂಸ್ ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ಹೊರಗಡೆ ಹೋಗುವಾಗ ಸನ್‌ಗ್ಲಾಸ್ ಬಳಸಿ. ಮನೆಯ ಕೈ ತೋಟದಲ್ಲಿ ಬೆಳೆದ ಪೈನಾಫಲ್ ಮತ್ತು ನೈಸರ್ಗಿಕ ಅರಿಶಿಣ ಪೌಡರ್‌ನ್ನು ಮಿಕ್ಸ್ ಮಾಡಿ ಹಚ್ಚಿಕೊಳ್ಳಿ. ಕಣ್ಣಿನ ಸುತ್ತ ಎದ್ದಿರುವ ಕಪ್ಪು ಕಲೆಗೆ ಬಾದಾಮಿ ಎಣ್ಣೆ ಹಚ್ಚಿಕೊಳ್ಳಿ.

ಮಶ್ರೂಮ್‌ಬಳಸಿ…ಕಣ್ಣು ರಕ್ಷಿಸಿ!

ಮಶ್ರೂಮ್ ನಲ್ಲಿ ವಿಟಮಿನ್ ಬಿ3 ಅಂಶ ಸಮೃದ್ಧವಾಗಿವೆ. ಇವು ರಕ್ತ ಪರಿಚಲನೆಯನ್ನು ಚುರುಕುಗೊಳಿಸುತ್ತವೆ. ಕೆರಾಟಿನ್ ಉತ್ಪಾದನೆಯನ್ನು ಹೆಚ್ಚಿಸಿ, ತ್ವಚೆಯ ಸೆಲ್ ಗಳ ಸಂತಾನೋತ್ಪತ್ತಿಗೆ ನೆರವಾಗುತ್ತದೆ. ಕಣ್ಣಿನ ರೆಪ್ಪೆ ವೇಗವಾಗಿ ಬೆಳೆಯಲೂ ಇದು ಸಹಾಯ ಮಾಡುತ್ತದೆ.

ಡ್ರೈಫ್ರುಟ್ ಗಳು ದೇಹದ ಆರೋಗ್ಯವನ್ನು ಕಾಪಾಡುವ ಜೊತೆಗೆ ಕಣ್ಣಿನ ರೆಪ್ಪೆಗಳ, ಅದರ ಬೇರುಗಳ ಬೆಳವಣಿಗೆಗೂ ನೆರವಾಗುತ್ತದೆ. ಬೀನ್ಸ್ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಪೋಲಿಕ್ ಆಮ್ಲ ಮತ್ತು ವಿಟಮಿನ್ ಎಚ್ ಇದ್ದು ಇದು ಕೂಡ ರೆಪ್ಪೆಯ ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ.

ನಿಮ್ಮ ಊಟದಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಧಾರಾಳವಾಗಿ ಸೇವಿಸಿ. ಇವು ದೇಹದಲ್ಲಿ ಕೊಲಾಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಹಾಗೂ ಕಣ್ಣಿನ ಸೌಂದರ್ಯ ಹೆಚ್ಚಿಸಲು ನೆರವಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!