ಕೊರೊನಾ ಲಸಿಕೆಯನ್ನೇ ಪ್ರಶ್ನೆ ಮಾಡಿ ಸಂಶೋಧಕರಿಗೆ ಅಪಮಾನ ಮಾಡಿದ್ದ ಕಾಂಗ್ರೆಸ್- ಸುಧಾಕರ್ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತುರ್ತು ಸಂದರ್ಭದಲ್ಲಿ ಕೊರೊನಾ ಲಸಿಕೆ ವಿರುದ್ಧ ಕಾಂಗ್ರೆಸ್‌ ಮಾಡಿದ ಆರೋಪ-ಪ್ರತ್ಯಾರೋಪಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಕಿಡಿಕಾರಿದ್ದಾರೆ. ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕರ್ನಾಟಕಕ್ಕೆ 2,141 ಕೋಟಿ ಮೌಲ್ಯದ ಕೋವಿಡ್ ಉಚಿತ ಲಸಿಕೆಯನ್ನು ಕೇಂದ್ರದ ಬಿಜೆಪಿ ಸರಕಾರ ನೀಡಿದೆ. ದೇಶಾದ್ಯಂತ 220 ಕೋಟಿ ಲಸಿಕೆ ಕೊಡಲಾಗಿದೆ. ರಾಜ್ಯದಲ್ಲಿ 12.21 ಕೋಟಿಗೂ ಹೆಚ್ಚು ಲಸಿಕೆ ನೀಡಿದ್ದೇವೆ. ವಿಶ್ವದಲ್ಲೇ ದಾಖಲೆ ಮಟ್ಟದಲ್ಲಿ ಇದು ನಡೆದಿದೆ. 1.15 ಕೋಟಿ ಬೂಸ್ಟರ್ ಡೋಸ್ ಕೊಡಲಾಗಿದೆ ಎಂದು ವಿವರಿಸಿದರು.

ಇಂತಹ ವೇಳೆ ಕೋವಿಡ್ ಲಸಿಕೆ ವಿಷಯದಲ್ಲಿ ಕಾಂಗ್ರೆಸ್ ನಡೆ ಖಂಡನಾರ್ಹ. ಲಸಿಕೆ ವಿಳಂಬಕ್ಕೆ ಕಾಂಗ್ರೆಸ್ ಟೀಕೆ ವ್ಯಕ್ತವಾಗಿತ್ತು. ತುರ್ತು ಸಂದರ್ಭ ಎಂಬ ವಿಚಾರ ಮರೆತು ಇಲ್ಲಿವರೆಗೆ ಕಾಂಗ್ರೆಸ್ ರಾಜಕಾರಣ ಬೆರೆಸಿದೆ. ಎಳ್ಳಷ್ಟೂ ಸಹಕಾರ ಕೊಡದೆ ಇರುವುದು ರಾಜ್ಯ ಮತ್ತು ದೇಶದ ಜನತೆಗೆ ಮಾಡಿದ ಘೋರ ಅಪರಾಧ ಎಂದು ಡಾ. ಕೆ ಸುಧಾಕರ್ ಅವರು ಟೀಕಿಸಿದರು.

ಲಸಿಕೆ ವಿಷಯದಲ್ಲಿ ಅಪಹಾಸ್ಯ ಮಾಡಿ ಮೋದಿ ಲಸಿಕೆ ಎಂದು ಕರೆದರು. ಕಾಂಗ್ರೆಸ್‍ನವರು ಕೆಲವು ಧರ್ಮಗಳ ನಂಬಿಕೆಗೆ ವಿರುದ್ಧ, ವ್ಯತಿರಿಕ್ತವಾಗಿ ವಿಶ್ವಾಸ ಕೆಡಿಸುವ ಕೆಲಸ ಮಾಡಿ ಸಂತಾನಶಕ್ತಿ ಕಳಕೊಳ್ಳುವ ಭೀತಿ ಹುಟ್ಟಿಸಿದ್ದಾರೆ. ಈ ವಿಚಾರವನ್ನು ನಾವು ಖಂಡಿಸುತ್ತೇವೆ. ಆರಂಭದಲ್ಲಿ ಅವರು ಲಸಿಕೆ ಪಡೆಯಲಿಲ್ಲ. ಬಳಿಕ ವಿಳಂಬವಾದರೂ ಅದರ ಮಹತ್ವ ಅರಿತು ಕ್ಯೂ ನಿಂತು ಲಸಿಕೆ ಪಡೆದರು. ಲಸಿಕೆಯನ್ನೇ ಪ್ರಶ್ನೆ ಮಾಡಿ ಸಂಶೋಧಕರಿಗೆ ಅಪಮಾನ ಮಾಡುವಂತೆ ರಾಹುಲ್ ಗಾಂಧಿ ನಡೆದುಕೊಂಡಿದ್ದನ್ನು ಆಕ್ಷೇಪಿಸಿದರು.

3 ವರ್ಷಗಳ ಹಿಂದೆ ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕ ಕೋವಿಡ್ ದೇಶವನ್ನು ಮತ್ತು ವಿಶ್ವವನ್ನು ಬಾಧಿಸಿತ್ತು. ನಿರ್ದಿಷ್ಟ ಚಿಕಿತ್ಸೆ- ಔಷಧಿ ಇಲ್ಲ ಎಂಬ ಅಂಶ ಎಲ್ಲರನ್ನೂ ಭಯಭೀತರನ್ನಾಗಿ ಮಾಡಿತ್ತು. ಇಂತಹ ಆತಂಕಕಾರಿ ಪರಿಸ್ಥಿತಿ, ಲಾಕ್ ಡೌನ್, ಆರ್ಥಿಕ ದುಸ್ಥಿತಿ ಕಾಡುವಂತಾಗಿತ್ತು. ಬಡಜನರು, ಶ್ರಮಿಕರು ತೊಂದರೆಗೆ ಒಳಗಾಗದಂತೆ ಬಿಜೆಪಿ ಸರಕಾರ ನೋಡಿಕೊಂಡಿದೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಾಯಕತ್ವ ನಮ್ಮನ್ನು ಕಾಪಾಡಿದೆ. ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸರಕಾರ ಇರಲಿಲ್ಲ. ಅನೇಕ ರಾಜ್ಯಗಳಲ್ಲಿ ಬೇರೆ ಪಕ್ಷಗಳ ಆಡಳಿತ ಇದ್ದರೂ ಮೋದಿಜಿ ದಿಟ್ಟವಾಗಿ ಕೋವಿಡ್ ಎದುರಿಸಿದ್ದಾರೆ.

ವಿಶ್ವಕ್ಕೇ ಮಾದರಿ ಆಗುವಂತೆ ಕಾರ್ಯ ನಿರ್ವಹಣೆ

ಜೀವ ಉಳಿಸುವ ಪ್ರಯತ್ನ, ಜನಜೀವನ ಅಸ್ತವ್ಯಸ್ಥ ಆಗದಂತೆ ನೋಡಿಕೊಳ್ಳುವ ಸವಾಲನ್ನು ವಿಶ್ವಕ್ಕೆ ಮಾದರಿಯಾಗಿ ನಿರ್ವಹಣೆ ಮಾಡಿದ್ದಾಗಿ ಡಾ. ಕೆ ಸುಧಾಕರ್ ಅವರು ಮಾಹಿತಿ ನೀಡಿದರು. ವಸುಧೈವ ಕುಟುಂಬಕಂ ನಾಣ್ಣುಡಿಯಂತೆ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟ ಪ್ರಧಾನಿಯವರು ಹತ್ತಾರು ಹೊರದೇಶಗಳಿಗೆ ಲಸಿಕೆ ನೀಡಿದ್ದಾರೆ. ಇದು ನಮ್ಮ ಹೃದಯ ಶ್ರೀಮಂತಿಕೆ, ದೇಶದ ಹಿರಿಮೆ, ಗರಿಮೆ ಅನಾವರಣ ಮಾಡಿದೆ ಎಂದು ತಿಳಿಸಿದರು.

ಇದೆಲ್ಲದರ ನಡುವೆ ಕಾಂಗ್ರೆಸ್‍ನ ನಡೆ ದೇಶಕ್ಕೆ ಮಾಡಿದ ದ್ರೋಹ. ಎಲ್ಲ ದೇಶಗಳ ಪ್ರಶಂಸೆ ಬಂದರೂ ಹಳೆಯ ಪಕ್ಷ ಕಾಂಗ್ರೆಸ್ ಮಾತ್ರ ತದ್ವಿರುದ್ಧವಾಗಿ ನಡೆದುಕೊಂಡದ್ದು, ಮೇಕ್ ಇನ್ ಇಂಡಿಯಾ, ಲಸಿಕೆಗೆ ಟೀಕೆ ಮಾಡಿದ್ದಾರೆ. ಇದು ಅತ್ಯಂತ ಖೇದಕರ ಎಂದು ನುಡಿದರು.
ಹಿಂದೆ ಅತ್ಯಂತ ಪ್ರಭಾವಿ ವ್ಯಕ್ತಿಗಳು ಮತ್ತು ಶ್ರೀಮಂತರಿಗೆ ಆರಂಭದಲ್ಲಿ ಲಸಿಕೆ ಕೊಡಲಾಗುತ್ತಿತ್ತು. ಆದರೆ, ಪ್ರಧಾನಿಯವರು ತಿಳಿಸಿದಂತೆ ವೈದ್ಯಕೀಯ ಕ್ಷೇತ್ರ, ನಂತರ ಪೌರಕಾರ್ಮಿಕರಿಗೆ ಲಸಿಕೆ ಕೊಡಲಾಯಿತು. ಇದು ಪಾರದರ್ಶಕ ಕ್ರಮ. ಲಸಿಕಾಕರಣದಿಂದ ಆರ್ಥಿಕ ಪುನಶ್ಚೇತನ ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.

3ನೇ ಅಲೆ ಬಂದಾಗ ಕಾಂಗ್ರೆಸ್‍ನವರು ಪಾದಯಾತ್ರೆ ಮಾಡಿದ್ದರು. ಆಗ ಕೋವಿಡ್ ಪರೀಕ್ಷೆಗೂ ಸಹಕರಿಸಲಿಲ್ಲ. ಬದಲಾಗಿ ಎಲ್ಲರೂ ಟೀಕಿಸುತ್ತಲೇ ಇದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!