ನಿಸರ್ಗ ತಾಣವಾದ ಕಾತರಕಿಯ ಸರ್ಕಾರಿ ಶಾಲೆ – ಸಮುದಾಯ ಸಹಭಾಗಿತ್ವದಿಂದ ಆಯಿತು ಶಾಲಾಭಿವೃದ್ಧಿ

ಪ್ರವೀಣ ಅ. ಮುರನಾಳ :

ಬೀಳಗಿ ತಾಲೂಕಿನ ಕಾತರಕಿ ಗ್ರಾಮದ ಪ್ರಕೃತಿ ಮಡಿಲಲ್ಲಿರುವ ‘ಅರಣ್ಯದಲ್ಲೊಂದು ಅಕ್ಷರಧಾಮ, ಕಲಿಯಲು ಒಂದು ಆಯಾಮ’ ಎಂಬ ಧ್ಯೇಯವಾಕ್ಯ ಹೊಂದಿರುವ ಸರ್ಕಾರಿ
ಪ್ರಾಥಮಿಕ ಮಾಚಪ್ಪನವರ ತೋಟದ ಶಾಲೆ ಸಮುದಾಯದ ಸಹಭಾಗಿತ್ವದಿಂದ ಉತ್ತಮ ಗುಣಾತ್ಮಕತೆ ಹೊಂದಿದೆ.

ಹಸಿರಿನಿಂದ ಕಂಗೊಳಿಸುತ್ತಿರುವ ಈ ಶಾಲೆಯಲ್ಲಿ 5ನೇ ತರಗತಿ ವರೆಗೆ ಒಟ್ಟು 28 ಮಕ್ಕಳು ಅಧ್ಯಯಿಸುತ್ತಿದ್ದಾರೆ. ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಪರಿಸರದ ಕುರಿತು ಅರಿವು ಮೂಡಿಸಲು ಶಾಲೆಯ ಆವರಣದ ಸುತ್ತಲೂ ವಿವಿಧ ಫಲ, ಪುಷ್ಪ, ಗಿಡ, ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಲಾಗಿದೆ.

ವಿವಿಧ ಆಯುರ್ವೇದ ಔಷಧೀಯ ಸಸ್ಯಗಳು :
ತೆಂಗು, ಚಿಕ್ಕು, ಪೇರಲ, ಸೀತಾಫಲ, ರಾಮಫಲ, ನೆಲ್ಲಿ, ಬೆಟ್ಟದ ನೆಲ್ಲಿ, ಬಿಲ್ವಪತ್ರೆ, ನೇರಳೆ, ಕರಿಬೇವು, ಹಲಸು, ಬಾಳೆ, ಮಾವು, ಹುಣಸೆ, ಕರ್ಜೂರ, ಪಪ್ಪಾಯಿ, ಅತ್ತಿ, ಅರಳಿ, ತೇಗು, ಕಣಗಲ, ನುಗ್ಗಿ, ರುದ್ರಾಕ್ಷಿ, ಅಶೋಕ ಮರ ಹಾಗೂ ಅಲಂಕಾರಿಕ, ಆಯುರ್ವೇದ ಔಷಧೀಯ ಸಸ್ಯಗಳನ್ನು ಬೆಳೆಯುವ ಮೂಲಕ ಪರಿಸರ ಪ್ರೇಮ ಮೆರಿದಿದ್ದಾರೆ.

ಸಸ್ಯ,ಗಿಡ, ಮರಗಳ ಹೆಸರು ಮತ್ತು ವೈಜ್ಞಾನಿಕ ಹೆಸರಿನ ತಿಳಿವಳಿಕೆ ನೀಡಲಾಗಿದೆ. ಇಲ್ಲಿ ಬೆಳೆದ ತರಕಾರಿಗಳನ್ನೇ ಮಧ್ಯಾಹ್ನ ಬಿಸಿಯೂಟಕ್ಕೆ ಬಳಸುತ್ತಿದ್ದಾರೆ. ಮಿಕ್ಕ ತರಕಾರಿ ಮಾರಾಟ ಮಾಡಿ ಬಂದ ಹಣದಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತಿದ್ದಾರೆ. ತೋಟದಲ್ಲಿ ಆಗುವ ಹಣ್ಣುಗಳ ಸೇವನೆ ಮಕ್ಕಳ ಪೌಷ್ಠಿಕತೆ ವೃದ್ಧಿಸುತ್ತಿದೆ.

ಶಾಲೆಯ ಆವರಣದಲ್ಲಿನ ಗಿಡ, ಮರಗಳಿಗೆ ನೀರುಣಿಸಲು ಕೊಳವೆ ಭಾವಿ ಕೊರೆಯಿಸಿ, ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಮೂಗು ಮುರಿಯುವ ಇಂದಿನ ದಿನಗಳಲ್ಲಿ ಸಮಾಜ ಕೈಜೋಡಿಸಿದರೆ ಶಾಲೆಗಳು ಅಭಿವೃದ್ಧಿ ಹೊಂದಬಹುದು ಎಂಬುದನ್ನು ಇಲ್ಲಿನ ಜನರು ಸಾಕ್ಷೀಕರಿಸಿದ್ದಾರೆ.

ಪ್ರಗತಿಪರ ರೈತ ವಿ. ಬಿ. ಮಾಚಪ್ಪನವರ ಈ ಶಾಲೆಯ ನಿರ್ಮಾಣಕ್ಕೆ 10 ಗುಂಟೆ ಜಮೀನು ದಾನವಾಗಿ ನೀಡಿದ್ದು, ಮೂರು ಕೋಣೆಗಳು ತಲೆ ಎತ್ತಿ ನಿಂತಿವೆ. ಇಲ್ಲಿಯೇ ಅಂಗನವಾಡಿ ಕೇಂದ್ರ ತೆರೆದಿದ್ದರಿಂದ ತೋಟದ ಶಾಲೆ ನಂದನವನ, ಅಕ್ಷರ ಕಲಿಯುವ ಮಕ್ಕಳ ಆಶಾಕಿರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!