ಕುಟುಂಬಕ್ಕೆ ಪರಿಹಾರ: ನವೀನ್ ಪಾರ್ಥಿವ ಶರೀರ ಕರ್ನಾಟಕಕ್ಕೆ ತರಲು ಆದ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಉಕ್ರೇನ್ ನಲ್ಲಿ ಮೃತಪಟ್ಟಿರುವ ನವೀನ್ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರುವುದು ಸರಕಾರದ ಪ್ರಥಮ ಆದ್ಯತೆಯಾಗಿದೆ. ಅವರ ಕುಟುಂಬಕ್ಕೆ ಎಲ್ಲ ಸಹಾಯ, ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಗ್ಯಾನಗೌಡರ್ ಅವರು ಹಾಕಿಕೊಂಡಿರುವ ಬಟ್ಟೆಗಳನ್ನು ಹೋಲುವ ಕೆಲವು ಛಾಯಾಚಿತ್ರಗಳನ್ನು ಆತನ ಸ್ನೇಹಿತರು ಕಳುಹಿಸಿಕೊಟ್ಟಿದ್ದಾರೆ. ಶೆಲ್ ದಾಳಿ ನಿಂತ ಮೇಲೆ ನವೀನ್ ಜೊತೆಗಿದ್ದವರು ತೆಗೆದ ಚಿತ್ರಗಳವು ಅವು. ಈ ಬಗ್ಗೆ ವಿದೇಶಾಂಗ ಸಚಿವರೊಂದಿಗೆ ಹಾಗೂ ಉಕ್ರೇನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ ಮಾತನಾಡಿ ನವೀನ್ ಪಾರ್ಥಿವ ಶರೀರವನ್ನು ಪಡೆಯಲು ಗಂಭೀರ ಪ್ರಯತ್ನ ಮಾಡಲಾಗುವುದು ಎಂದರು.

ಭಾರತ ಸರಕಾರ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ತೆರವು ಮಾಡಲು ತೀವ್ರ ಪ್ರಯತ್ನ ಮಾಡುತ್ತಿದೆ. ಸುಮಾರು 26 ವಿಮಾನಗಳು ಮುಂದಿನ 2-3 ದಿನಗಳಲ್ಲಿ ಕರೆತರುತ್ತಿದ್ದು, ಈ ಪೈಕಿ ಕನ್ನಡಿಗರನ್ನು ಕರೆತರಲು ಗರಿಷ್ಠ ಪ್ರಯತ್ನ ಮಾಡಲಾಗುವುದು.
ಬೇರೆ ಬೇರೆ ನಗರಗಳಲ್ಲಿ ಇರುವವರನ್ನು ಬೇರೆ ಬೇರೆ ದಿಕ್ಕಿನಲ್ಲಿ ಬರಲು ತಿಳಿಸಲಾಗಿದೆ. ನಿರಂತರವಾಗಿ ಸಮನ್ವಯ ಮಾಡಲಾಗುತ್ತಿದೆ ಎಂದರು.

ಯುದ್ಧ ನಡೆಯುತ್ತಿರುವುದರಿಂದ ಸ್ವಲ್ಪ ಕಷ್ಟವಾಗಿದೆ. ಭಾರತ ಸರಕಾರ ಉಕ್ರೇನ್ ಸರಕಾರದೊಂದಿಗೆ ಮಾತನಾಡಿ ಸುರಕ್ಷಿತ ವಲಯಗಳಿಗೆ ಹೇಗೆ ಹೋಗಬೇಕೆನ್ನುವುದನ್ನು ಯೋಜಿಸಿ ಗುಂಪಿನಲ್ಲಿ ತೆರಳಲು ನಿರ್ದೇಶನ ನೀಡಿದೆ. ಹತ್ತಿರದ ರೈಲ್ವೆ ನಿಲ್ದಾಣದಲ್ಲಿ ಪಶ್ಚಿಮ ದಿಕ್ಕಿನತ್ತ ಬರಲು ಯೋಜಿಸಿದೆ. ಯುದ್ಧ ಭೂಮಿಯಿಂದ ಕನ್ನಡಿಗರನ್ನು ಹೊರತರುವ ಪ್ರಯತ್ನ ನಡೆದಿದೆ ಎಂದು ಸಿಎಂ ತಿಳಿಸಿದರು.

ನವೀನ್ ಜೊತೆಗಿದ್ದವರ ಬಗ್ಗೆ ವಿಚಾರಣೆ:
ನವೀನ್ ಜೊತೆಗಿದ್ದ ಗಾಯಾಳು ವಿದ್ಯಾರ್ಥಿಯ ಸ್ಥಿತಿಗತಿಯ ಬಗ್ಗೆ ವಿಚಾರಣೆ ನಡೆದಿದೆ. ಒಂದು ವರದಿಯ ಪ್ರಕಾರ ಜೊತೆಗಿದ್ದ, ಮತ್ತೊಂದರ ಪ್ರಕಾರ ಇರಲಿಲ್ಲ. ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿಗಳಿವೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!