ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲಿನ ರಷ್ಯಾದ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ನವೀನ್ ಅವರ ಮೃತದೇಹ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್ ಮೃತದೇಹ ಪತ್ತೆಗಾಗಿ ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಜತೆ ಸಂಪರ್ಕದಲ್ಲಿದ್ದು, ನವೀನ್ ಮೃತ ದೇಹ ಸಿಕ್ಕಿದ್ದು, ಉಕ್ರೇನಿನ ಶವಾಗಾರದಲ್ಲಿದೆ. ಸದ್ಯ ಉಕ್ರೇನ್ ನಲ್ಲಿ ಯುದ್ದದ ಬಿಗು ವಾತಾವರಣ ಇದೆ. ಶೀಘ್ರದಲ್ಲಿ ನವೀನ್ ಮೃತ ದೇಹವನ್ನು ತರುವ ಬಗ್ಗೆ ಅಧಿಕಾರಿಗಳ ಜತೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಉಕ್ರೇನ್ ನಲ್ಲಿ ನವೀನ್ ನಿಧನದ ಸುದ್ದಿ ಬಂದ ಕೂಡಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೃತ ನವೀನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದರು. ಜತೆಗೆ ನವೀನ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದರು.