ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೋಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಠಾಣೆಯಲ್ಲಿಯೇ ದಲಿತನನ್ನು ನಿಂದಿಸಿ ಆತನ ಮುಖದ ಮೇಲೆ ಉಗುಳಿ ಆತನಿಂದ ತನ್ನ ಬೂಟುಗಳನ್ನು ನೆಕ್ಕಿಸಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ. ದಲಿತರಿಗೆ ಅನ್ಯಾಯವಾದರೆ ಪೊಲೀಸ್ ಠಾಣೆಗೆ ಬರುತ್ತಾರೆ. ಹೀಗಿರುವಾಗ ಪೊಲೀಸ್ ಠಾಣೆಯಲ್ಲೇ ದಲಿತರೊಬ್ಬರ ಮೇಲೆ ಕ್ರೂರವಾಗಿ ವರ್ತಿಸಿದ ಪೊಲೀಸ್ ಅಧಿಕಾರಿ ದಿನೇಶ್ ಪಾಟೀಲ್ ಅವರನ್ನು ಮೇಲಧಿಕಾರಿಗಳು ಅಮಾನತುಗೊಳಿಸಿದ್ದಾರೆ.
ದಿನೇಶ್ ಪಾಟೀಲ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ವಿಕಾಸ್ ಉಜ್ಗರೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ವಿವರ ನೀಡಿದರು. ರಾತ್ರಿ ತಾನು ಮತ್ತು ತನ್ನ ಸ್ನೇಹಿತ ಚೈನೀಸ್ ರೆಸ್ಟೊರೆಂಟ್‌ನಲ್ಲಿ ಇದ್ದಾಗ ರೆಸ್ಟೊರೆಂಟ್‌ನ ಮಾಲೀಕರೊಂದಿಗೆ ಘರ್ಷಣೆ ನಡೆದ ಕಾರಣ ನಾವು ಪೊಲೀಸರಿಗೆ ಕರೆ ಮಾಡಿದೆವು
ಕಾಳಂಬೋಳಿ ಠಾಣೆಯಿಂದ ಪೊಲೀಸರು ಅಲ್ಲಿಗೆ ಬಂದು ಗಾಯಗೊಂಡಿರುವ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಅಂಗಲಾಚಿದರೂ ಕಿವಿಗೊಡಲಿಲ್ಲ. ಕೊನೆಗೆ ತುಂಬಾ ರಿಕ್ವೆಸ್ಟ್ ಮಾಡಿಕೊಂಡಿದ್ದಕ್ಕೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿನ ವೈದ್ಯರು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದರು.
ಆದರೆ, ಪೊಲೀಸರು ಠಾಣೆಗೆ ಕರೆದೊಯ್ದು ನೆಲದ ಮೇಲೆ ಕೂರಿಸಿದ್ದಾರೆ. ಬಳಿಕ ದಿನೇಶ್ ಪಾಟೀಲ್ ಅವರ ಬಳಿ ಬಂದು ಕೆನ್ನೆಗೆ ಬಾರಿಸಿ ನಮ್ಮ ಮುಖದ ಮೇಲೆ ಉಗುಳಿ ಬೂಟುಗಳನ್ನು ನೆಕ್ಕಿಸಿದರು ಎಂದು ಅಳಲು ತೋಡಿಕೊಂಡರು. ಕೊನೆಗೆ ಅವರನ್ನು ಬಿಡುಗಡೆ ಮಾಡಿದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವು ಎಂದು ಮಾಹಿತಿ ನೀಡಿದರು.