ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ಗೆ ಬಲಿಯಾದ ಸಂದರ್ಭದಲ್ಲಿ ಆತನ ಜತೆ ಇದ್ದ ಇತರ ನಕ್ಸಲರು ಪರಾರಿಯಾಗಿದ್ದರು. ಈ ಹಿನ್ನಲೆಯಲ್ಲಿ ಪರಾರಿಯಾದ ನಕ್ಸಲರಿಗಾಗಿ ಕರಾವಳಿಯ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಕೂಂಬಿಂಗ್ ತೀವ್ರಗೊಂಡಿದೆ.
ವಿಕ್ರಂ ಗೌಡ ಜತೆಗೆ ಬಂದಿದ್ದ ಇತರ ನಕ್ಸಲರು ಪರಾರಿಯಾಗಿರುವುದು ಉಡುಪಿ ಜಿಲ್ಲೆಯ ಕಾರ್ಕಳದ ಪೀತಬೈಲ್ ಸೇರಿದಂತೆ ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ. ತಪ್ಪಿಸಿಕೊಂಡ ನಕ್ಸಲರ ಜಾಡು ಹಿಡಿದು ಶೋಧ ಕಾರ್ಯ ನಡೆಸುತ್ತಿರುವ ಎಎನ್‌ಎಫ್ ಅಧಿಕಾರಿಗಳು ಕಬ್ಬಿನಾಲೆ, ಪೀತಬೈಲ್, ನಾತ್ಪಾಲು, ಕೂಡ್ಲು ಅರಣ್ಯವ್ಯಾಪ್ತಿಯಲ್ಲೇ ಬೀಡುಬಿಟ್ಟಿದ್ದಾರೆ. ಕಾಡಿಗೆ ಹೋಗದಂತೆ ಸ್ಥಳೀಯ ನಿವಾಸಿಗಳಿಗೆ ಸೂಚಿಸಲಾಗಿದೆ ಎನ್ನಲಾಗಿದೆ.
ಉಡುಪಿ ಜಿಲ್ಲೆಯ ಗಡಿ ಭಾಗ, ನಕ್ಸಲ್ ಭಾದಿತ ವಿವಿಧ ಜಿಲ್ಲೆಯ ಗಡಿಯಲ್ಲಿ, ನಕ್ಸಲ್ ಬಾದಿತ ಕೂಡ್ಲು, ಮೇಗದ್ದೆ, ಕಬ್ಬಿನಾಲೆ ಪ್ರದೇಶದಲ್ಲಿ ನಿರಂತರವಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದೆದೆ. ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಅಲ್ಲಲ್ಲಿ ತಂಡ ಮಾಡಿಕೊಂಡು ಅತ್ಯುತ್ತಮ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಕಾರ್ಕಳ ನಕ್ಸಲ್ ನಿಗ್ರಹ ಪಡೆಯ ಎಸ್.ಪಿ. ಜಿತೇಂದ್ರ ದಯಾಮ ಮಾಹಿತಿ ನೀಡಿದ್ದಾರೆ.
ನಕ್ಸಲ್ ಚಟುವಟಿಕೆ ಮತ್ತೆ ಆರಂಭಗೊಂಡ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಯೋಧರನ್ನು ನಿಯೋಜಿಸಿ ರಾಜ್ಯ ಆಂತರಿಕ ಭದ್ರತಾ ಪಡೆ ವಿಭಾಗದ ಡಿಜಿಪಿ ಪ್ರಣಬ್ ಮೋಹಂತಿ ಗುರುವಾರ ಆದೇಶ ಹೊರಡಿಸಿದ್ದಾರೆ. ಕೂಬಿಂಗ್ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗಲಿದೆ.
ಗಡಿಭಾಗಗಳಲ್ಲಿ ವಾಹನ ತಪಾಸಣೆ:
ನಕ್ಸಲ್ ತಂಡದಲ್ಲಿ ಇನ್ನೂ ಕೆಲವರಿದ್ದು ಒಟ್ಟು ಆರು ಮಂದಿ ಬಂದಿರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್ ಹಾಕಿ ಕಣ್ಣಾವಲು ಇರಿಸಲಾಗಿದೆ. ಕೆರೆಕಟ್ಟೆ, ಸಂಪಾಜೆ ಮತ್ತಿತರೆಡೆಗಳಲ್ಲಿ ವಾಹನ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಪೊಲೀಸರು ದ್ವಿಚಕ್ರವೂ ಸೇರಿದಂತೆ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿಯೇ ಬಿಡುತ್ತಿದ್ದಾರೆ. ಈ ನಡುವೆ ವಿಕ್ರಂ ಗೌಡನ ಎನ್‌ಕೌಂಟರ್ ನಡೆದ ಜಾಗಕ್ಕೆ ಬೆಂಗಳೂರಿನ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ತಪ್ಪಿಸಿಕೊಂಡ ನಕ್ಸಲರ ಗುಂಪು ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ಸಾಧ್ಯತೆಯಿರುವ ಶಂಕೆ ವ್ಯಕ್ತವಾಗಿದ್ದು, ನಕ್ಸಲ್ ನಿಗ್ರಹ ದಳ ಕೊಡಗು ಜಿಲ್ಲೆಯ ಗಡಿಭಾಗ ಸೇರಿದಂತೆ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಕೊಡಗು ಪೊಲೀಸರು ಇದಕ್ಕೆ ಕೈಜೋಡಿಸಿದ್ದಾರೆ. ಕೊಡಗು ಜಿಲ್ಲೆಯ ಗಡಿ ಭಾಗವಾದ ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ನಾಕಾಬಂಧಿ ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ವಾಹನವನ್ನೂ ತಪಾಸಣೆ ನಡೆಸುತ್ತಿದ್ದಾರೆ. ನಕ್ಸಲರು ಹಿಂದೆ ಓಡಾಟ ನಡೆಸಿದ್ದ ಸ್ಥಳಗಳಲ್ಲಿಯೂ ಕೊಂಬಿಂಗ್ ಕಾರ್ಯಾಚರಣೆ
ನಡೆಸಲಾಗುತ್ತಿದೆ.