ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಮಾರ್ಚ್ ವೇಳೆ ದೇಶದಾದ್ಯಂತ ನಕ್ಸಲಿಸಂ ಅನ್ನು ನಿರ್ನಾಮ ಮಾಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿ ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಕ್ಸಲ್ ಬೆದರಿಕೆಗಳಿಂದ ದೇಶವನ್ನು ಮುಕ್ತ ಮಾಡಲಿದೆ. ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ನಕ್ಸಲಿಸಂಗೆ ಉತ್ತೇಜನ ನೀಡುತ್ತಿರುವ ದಲಿತ ವಿರೋಧಿ, ಬುಡಕಟ್ಟು ವಿರೋಧಿ, ಬಡವರ ಮತ್ತು ಯುವ ವಿರೋಧಿ ಹೇಮಂತ್ ಸರ್ಕಾರವನ್ನು ಜಾರ್ಖಂಡ್‌ನಿಂದ ಕಿತ್ತೊಗೆಯುವ ಸಮಯ ಬಂದಿದೆ’ ಎಂದು ಗುಡುಗಿದರು.
ಕಳೆದ ಐದು ವರ್ಷಗಳಲ್ಲಿ ಜಾರ್ಖಂಡ್‌ನಲ್ಲಿ ನಕ್ಸಲ್ ಬೆದರಿಕೆಗಳನ್ನು ತಡೆಯಲಾಗಿದೆ, 2026ರ ಮಾರ್ಚ್ ವೇಳೆಗೆ ದೇಶದಲ್ಲಿ ನಕ್ಸಲಿಸಂ ನಾಶವಾಗಲಿದೆ ಎಂದರು.
ಇದೇ ವೇಳೆ ಜಾರ್ಖಂಡ್‌ನಲ್ಲಿ ಎನ್‌ಡಿಎ ಪಕ್ಷವು 81 ಕ್ಷೇತ್ರಗಳಲ್ಲಿ 51 ಸ್ಥಾನಗಳಲ್ಲಿ ಜಯ ಗಳಿಸಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.