ಹೊಸದಿಗಂತ ಡಿಜಿಟಲ್ ಡೆಸ್ಕ್:
ನ.5ರಂದು ಅಮೆರಿಕ ಅಧ್ಯಕ್ಷರ ಆಯ್ಕೆಗಾಗಿ ಮತದಾನ ನಡೆಯಲಿದ್ದು, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಅಭ್ಯರ್ಥಿಗಳಿಬ್ಬರು ಕೊನೆ ಹಂತದ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ಮತದಾನ ಪ್ರಕ್ರಿಯೆ ಆರಂಭವಾಗುವುದಕ್ಕೂ 50 ಗಂಟೆಗಳ ಮೊದಲು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದ ಕಾರಣ, ಉಭಯ ನಾಯಕರು ಮತದಾರರ ಓಲೈಕೆಗಾಗಿ ಕೊನೆ ಕ್ಷಣದ ಕಸರತ್ತಿಗೆ ಮೊರೆ ಹೋಗಿದ್ದಾರೆ.
ವಿಸ್ಕನ್‌ಸಿನ್‌ನಲ್ಲಿ ನಡೆದ ಭಾರಿ ಪ್ರಚಾರಸಭೆಯಲ್ಲಿ ಮಾತನಾಡಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ‘ಈ ಬಾರಿ ನಮ್ಮದೇ ಗೆಲುವು’ ಎಂದರು.
ಕಮಲಾ ಹ್ಯಾರಿಸ್ ಅವರು ವಿಸ್ಕನ್‌ಸಿನ್, ನಾರ್ತ್ ಕೆರೋಲಿನಾ ಹಾಗೂ ‘ರಸ್ಟ್ ಬೆಲ್ಟ್’ನಲ್ಲಿ ಪ್ರಚಾರ ನಡೆಸಿ, ಮತದಾರರ ಮನ ಗೆಲ್ಲಲು ಕಸರತ್ತು ನಡೆಸಿದರು. ಮಿಚಿಗನ್, ಜಾರ್ಜಿಯಾ ಹಾಗೂ ಪೆನ್ವಿಲ್ವೇನಿಯಾದಲ್ಲಿ ಮತಯಾಚಿಸಿದರು.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯೂ ಆಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವರ್ಜಿನಿಯಾದಲ್ಲಿ ಪ್ರಚಾರ ನಡೆಸಿದ್ದು, ಮುಂದಿನ ದಿನಗಳಲ್ಲಿ ಪೆನ್ಸಿಲ್ವೇನಿಯಾ, ನಾರ್ತ್ ಕೆರೋಲಿನಾ ಹಾಗೂ ಜಾರ್ಜಿಯಾ ರಾಜ್ಯಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ.
78 ವರ್ಷದ ಡೊನಾಲ್ಡ್ ಟ್ರಂಪ್ ಸಹ ಮತದಾರರ ಓಲೈಕೆಗೆ ಬಿರುಸಿನ ಪ್ರಚಾರ ನಡೆಸಿದರು. ಸ್ಪೇನ್ ಮೂಲದ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಟ್ರಂಪ್ ಅವರು ಭಾನುವಾರ ಪ್ರಚಾರ ಕೈಗೊಳ್ಳದಿದ್ದುದು ಗಮನಾರ್ಹ.
ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಅವರು ಟಿ.ವಿ ಹಾಗೂ ಇತರ ಆನ್‌ಲೈನ್ ಮಾಧ್ಯಮಗಳ ಮೂಲಕವೂ ವ್ಯಾಪಕ ಪ್ರಚಾರ ಕೈಗೊಂಡು, ಮತಯಾಚನೆ ನಡೆಸಿದ್ಧಾರೆ. ಮತ ಯಾಚನೆಗೆ ಸಂಬಂಧಿಸಿ, ರೇಡಿಯೊಗಳಲ್ಲಿ ಕೂಡ ಹೆಚ್ಚು ಜಾಹೀರಾತುಗಳು ಬಿತ್ತರವಾಗಿವೆ.
ಅಮೆರಿಕ ಅಧ್ಯಕ್ಷರ ಆಯ್ಕೆಗೆ ಇದೇ 5ರಂದು ಚುನಾವಣೆ ನಡೆಯಲಿದ್ದು ಇದಕ್ಕೂ ಮೊದಲು ನಡೆದ ಆರಂಭಿಕ ಮತದಾನ ಪ್ರಕ್ರಿಯೆಯಲ್ಲಿ ಕೆಲವರು ಮತಗಟ್ಟೆಗಳಿಗೆ ಖುದ್ದಾಗಿ ಬಂದು ಮತ ಚಲಾಯಿಸಿದರೆ ಮತ್ತೂ ಕೆಲವರು ಅಂಚೆ ಮತದಾನದಲ್ಲಿ ಪಾಲ್ಗೊಂಡರು. ಈ ವೇಳೆ 7.5 ಕೋಟಿಗೂ ಅಧಿಕ ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವನಾ ಮಂಡಳಿ ಮೂಲಗಳು ಹೇಳಿವೆ. ಆರಂಭಿಕ ಮತದಾನಕ್ಕಾಗಿ ಕಲ್ಪಿಸಿದ್ದ ಅವಕಾಶವನ್ನು ದೇಶದಾದ್ಯಂತ ಹೆಚ್ಚು ಜನರು ಬಳಕೆ ಮಾಡಿಕೊಂಡಿದ್ದಾರೆ. ಕೆಲವು ಖುದ್ದಾಗಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದ್ದರೆ ಇನ್ನೂ ಕೆಲವರು ಅಂಚೆ ಮೂಲಕ ಮತ ಹಾಕಿದ್ದಾರೆ ಎಂಧು ಮಂಡಳಿಯ ಕಾರ್ಯಕಾರಿ ನಿರ್ದೇಶಕ ಮೈಕಲ್ ರ‍್ಯಾನ್ ಹೇಳಿದ್ದಾರೆ. ಆರಂಭಿಕ ಮತದಾನಕ್ಕಾಗಿ ನ್ಯೂಯಾರ್ಕ್‌ನ ಹಲವೆಡೆ ಮತಗಟ್ಡೆಗಳನ್ನು ಸ್ಥಾಪಿಸಲಾಗಿತ್ತು.