ಹೊಸದಿಗಂತ ಡಿಜಿಟಲ್ ಡೆಸ್ಕ್;
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಪಾಕ್ನ ಅರ್ಷದ್ ನದೀಮ್ ಮತ್ತು ಬೆಳ್ಳಿ ಗೆದ್ದ ಭಾರತದ ನೀರಜ್ ಚೋಪ್ರಾ ಅವರ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದರ ನಡುವೆ ಇಬ್ಬರ ತಾಯಂದಿರೂ ಕೂಡ ಸಾಧನೆ ಮಾಡಿದ್ದು ನಮ್ಮ ಮಕ್ಕಳೇ ಎಂದು ಹರ್ಷ ವ್ಯಕ್ತಪಡಿಸುವ ಮೂಲಕ ತಾಯಿ ಮಮತೆ ತೋರಿದ್ದಾರೆ.
ನೀರಜ್ ಚೋಪ್ರಾ ತಾಯಿ ಹೇಳಿದ್ದೇನು?
ನೀರಜ್ ಬೆಳ್ಳಿ ಪದಕ ಗೆದ್ದ ಸಂತಸದಲ್ಲಿ ಎಎನ್‌ಐ ಜತೆ ಮಾತನಾಡಿದ ನೀರಜ್ ಅವರ ತಾಯಿ ಸರೋಜ್ ದೇವಿ, “ಮಗನ ಸಾಧನೆ ಬಗ್ಗೆ ಅತೀವ ಸಂತಸವಿದೆ. ಆತ ಮನೆಗೆ ಮರಳಿದ ತಕ್ಷಣ ಪ್ರಿಯವಾದ ಅಡುಗೆ ಮಾಡಿ ಬಡಿಸಲು ಕಾಯುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ಅರ್ಷದ್ ನದೀಮ್ ಸಾಧನೆಯನ್ನು ಕೂಡಾ ಮುಕ್ತಕಂಠದಿಂದ ಹೊಗಳಿದ್ದಾರೆ. ನದೀಮ್ ಚಿನ್ನ ಗೆದದ್ದು ಕೂಡ ನನಗೆ ಅಪಾರ ಸಂತಸವಿದೆ. ಆತ ಕೂಡಾ ನಮ್ಮ ಮಗ ಇದ್ದಂತೆ ಎಂದು ಹೇಳುವ ಮೂಲಕ ತಾಯಿ ಪ್ರೀತಿ ತೋರಿದ್ದರು.
ಅರ್ಷದ್ ತಾಯಿ ಹೇಳಿದ್ದೇನು?
ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಅವರ ತಾಯಿ ಕೂಡ ತಮ್ಮ ಮಗನ ಸಾಧನೆ ಜತೆ ನೀರಜ್ ಸಾಧನೆಯನ್ನು ಕೊಂಡಾಡಿದ್ದಾರೆ. ನೀರಜ್ ಮತ್ತು ಅರ್ಷದ್ ಉತ್ತಮ ಸ್ನೇಹಿತರು. ಆದರೆ, ನನಗೆ ಇಬ್ಬೂ ಕೂಡ ಮಕ್ಕಳಿದಂತೆ. ಯಾರೇ ಸಾಧನೆ ಮಾಡಿದರೂ ಕೂಡ ನನಗೆ ಸಂತಸವಾಗುತ್ತದೆ. ನೀರಜ್ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದಾನೆ. ನೀರಜ್ ಇನ್ನೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಆಶೀರ್ವಾದ ದೇವರು ಅವರಿಗೆ ಕರಿಣಿಸಲಿ ಎಂದು ಹೇಳುವ ಮೂಲಕ ಭಾರತೀಯರ ಹೃದಯ ಗೆದ್ದಿದ್ದಾರೆ.
5 ತಿಂಗಳ ಹಿಂದೆ ಜಾವೆಲಿನ್ ಖರೀದಿಸಲು ಹೆಣಗಾಡುತ್ತಿದ್ದ ವೇಳೆ ನೀರಜ್ ಅವರು ಅರ್ಷದ್ಗೆ ಬೆಂಬಲ ಸೂಚಿಸಿದ್ದರು. ಚಿನ್ನ ಗೆದ್ದಾಗಲೂ ಕೂಡ ಈ ಸಾಧನೆಗೆ ನನ್ನ ಗೆಳೆಯ ನೀರಜ್ ಅವರೇ ಸ್ಫೂರ್ತಿ ಎಂದು ಹೇಳುವ ಮೂಲಕ ನೀರಜ್ ಸಹಾಯವನ್ನು ಅರ್ಷದ್ ನೆನೆಪಿಸಿಕೊಂಡರು.