ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ನೀಟ್ ಅಕ್ರಮದ ಕುರಿತು ಗದ್ದಲ ಜೋರಾಗಿದ್ದು, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೀಟ್ ಅಕ್ರಮದ ಕುರಿತು ಮಾತನಾಡುವಾಗ ಅವರ ಮೈಕ್ ಆಫ್ ಆಗಿದ್ದು, ಸ್ಪೀಕರ್ ಓಂ ಬಿರ್ಲಾ (Om Birla) ಅವರೇ ಮೈಕ್ ಆಫ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುವಾಗ ಸ್ಪೀಕರ್ ಸರ್, ನನಗೆ ಮೈಕ್ ಕೊಡಿ ಎಂದಿದ್ದಾರೆ. ಆಗ ಸ್ಪೀಕರ್, “ನನ್ನ ಬಳಿ ಯಾವುದೇ ಬಟನ್ ಇಲ್ಲ” ಎಂದಿದ್ದಾರೆ. ಇದಕ್ಕೂ ಮೊದಲು ರಾಹುಲ್ ಗಾಂಧಿ ಅವರು ಮಾತನಾಡಿದರು.’ದೇಶದ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ಪ್ರತಿಪಕ್ಷಗಳ ಕಡೆಯಿಂದ ಜಂಟಿ ಸಂದೇಶ ನೀಡಲು ಬಯಸುತ್ತೇವೆ. ಹಾಗೆಯೇ, ವಿದ್ಯಾರ್ಥಿಗಳಿಗೆ ಗೌರವ ನೀಡುವ ದಿಸೆಯಲ್ಲಿ ಸಂಸತ್ತಿನಲ್ಲಿ ನಾವು ನೀಟ್ ಕುರಿತು ಗಂಭೀರವಾಗಿ ಚರ್ಚಿಸೋಣ’ಎಂದರು. ಇದೇ ವೇಳೆ ರಾಹುಲ್ ಗಾಂಧಿ ಅವರ ಮೈಕ್ ಆಫ್ ಆಗಿದ್ದು, ಪ್ರತಿಪಕ್ಷಗಳು ಗಲಾಟೆ ಮಾಡಿವೆ. ಆಗ ಸ್ಪೀಕರ್ ಅವರು ನನ್ನ ಬಳಿ ಬಟನ್ ಇಲ್ಲ ಎಂದಿದ್ದಾರೆ.
ಪ್ರತಿಪಕ್ಷಗಳ ಗದ್ದಲದ ನಡುವೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದರು.
ಕಾಂಗ್ರೆಸ್ ಆಕ್ರೋಶ
‘ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ದೇಶದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಾತನಾಡುವಾಗ ಸ್ಪೀಕರ್ ಓಂ ಬಿರ್ಲಾ ಅವರು ಏಕೆ ಮೈಕ್‌ಅನ್ನು ಆಫ್ ಮಾಡಿದ್ದಾರೆ’ ಎಂದು ಕೇರಳ ಕಾಂಗ್ರೆಸ್ ಘಟಕದ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಅಲ್ಲದೆ, ರಾಹುಲ್ ಗಾಂಧಿ ಅವರು ಮಾತನಾಡುವಾಗಲೇ ಮೈಕ್ ಆಫ್ ಆಗುವ ವಿಡಿಯೊವನ್ನು ಕೂಡ ಹಲವು ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದಾರೆ.