September 28, 2026
Monday, September 28, 2026
spot_img

ನೀಟ್ ಕನಸು ನುಚ್ಚುನೂರು: ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿನಿ

ಹೊಸದಿಗಂತ ವರದಿ ಕಲಬುರಗಿ:

ನೀಟ್ ಪರೀಕ್ಷೆ ಬರೆದಿದ್ದ ಯುವತಿಯೊಬ್ಬಳು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೋರ್ಟ್ ವೃತ್ತದ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ಭಾಗ್ಯಶ್ರೀ (18) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಮೃತ ವಿದ್ಯಾರ್ಥಿನಿಯು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92 ರಷ್ಟು ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಳು. ವೈದ್ಯಕೀಯ ಶಿಕ್ಷಣದ ಕನಸು ಕಂಡಿದ್ದ ಆಕೆ, ಇತ್ತೀಚೆಗಷ್ಟೇ ಮೇ 2 ರಂದು ನೀಟ್ ಪರೀಕ್ಷೆಯನ್ನು ಬರೆದಿದ್ದಳು ಎನ್ನಲಾಗಿದೆ.

ಇದನ್ನೂ ಓದಿ:

ತಂದೆಯ ಕಣ್ಣೀರು: ಪರೀಕ್ಷೆಯ ಆತಂಕದ ಶಂಕೆ

ಘಟನೆಯ ಬಳಿಕ ಮಾಧ್ಯಮಗಳ ಎದುರು ಮೃತಳ ತಂದೆ ರಾಜಶೇಖರ್ ಅವರು ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾರೆ. ಆಕೆಗೆ ನೀಟ್ ಪರೀಕ್ಷೆಯ ಬಗ್ಗೆ ಬಹಳ ನಿರೀಕ್ಷೆಗಳಿದ್ದವು. ಆದರೆ ಒಳಗೊಳಗೇ ಪರೀಕ್ಷೆಯ ಫಲಿತಾಂಶದ ಬಗ್ಗೆ ಏನಾದರೂ ಆತಂಕ ಇತ್ತೋ ಏನೋ ತಿಳಿಯದು. ಆಕೆ ಯಾವುದೇ ಡೆತ್‌ನೋಟ್ ಬರೆದಿಲ್ಲ, ಕಾರಣವನ್ನೂ ಹೇಳಿಲ್ಲ. ಕುಟುಂಬಸ್ಥರ ಜತೆ ತುಂಬಾ ಚೆನ್ನಾಗಿಯೇ ಇದ್ದಳು. ಇವಾಗ ಆಕೆಯೇ ನಮ್ಮನ್ನು ಬಿಟ್ಟು ಹೋಗಿದ್ದಾಳೆ, ನಾವು ಯಾರ ಮೇಲೆ ದೂರೋಣ? ನಾವು ಯಾರ ಮೇಲೆಯೂ ಅಪಾದನೆ ಮಾಡುವುದಿಲ್ಲ ಎಂದು ಅವರು ಅತ್ಯಂತ ದುಃಖದಿಂದ ನುಡಿದಿದ್ದಾರೆ.

ಪೊಲೀಸ್ ತನಿಖೆ ಆರಂಭ

ಘಟನೆಗೆ ಸಂಬಂಧಿಸಿದಂತೆ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Must Read