ಶ್ರೀ ಭಗಂಡೇಶ್ವರ ಕ್ಷೇತ್ರದ ಕಡೆಗಣನೆ: ವೀಣಾ ಅಚ್ಚಯ್ಯ ಅಸಮಾಧಾನ

ಹೊಸದಿಗಂತ ವರದಿ ಮಡಿಕೇರಿ:

ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯವನ್ನು ಸರ್ಕಾರ ಕಡೆಗಣಿಸಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಆರೋಪಿಸಿದ್ದಾರೆ.

ಭಾಗಮಂಡಲಕ್ಕೆ ಭೇಟಿ ನೀಡಿದ್ದ ಅವರು, ದೇವಾಲಯ ಮತ್ತು ನೂತನ ಸೇತುವೆಯ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಸರ್ಕಾರ ಶ್ರೀ ಭಗಂಡೇಶ್ವರ ದೇವಾಲಯದ ನಿರ್ವಹಣೆಗೆ ಹೆಚ್ಚು ಒತ್ತು ನೀಡದೆ ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾಗಮಂಡಲದ ಮೇಲುಸೇತುವೆ ನಿರ್ಮಾಣ ಕಾರ್ಯ ಒಂದಿಲ್ಲ ಒಂದು ಕಾರಣದಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದರು. ತ್ರಿವೇಣಿ ಸಂಗಮದ ಸಮೀಪ ನಿರ್ಮಿಸಲಾಗಿರುವ ಶೌಚಾಲಯ ಅವೈಜ್ಞಾನಿಕ ಕಾಮಗಾರಿಯ ಕಾರಣದಿಂದ ಮುಚ್ಚಲ್ಪಟ್ಟಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡಬೇಕು, ಆ ಮೂಲಕ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ಇಚ್ಛಾಶಕ್ತಿಯ ಕೊರತೆ: ಮಠ-ಮಂದಿರಕ್ಕೆ ಸಾಕಷ್ಟು ಹಣ ನೀಡುತ್ತಿರುವ ರಾಜ್ಯ ಸರ್ಕಾರ ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯದ ಮಂದಿಗೆ ಕಾವೇರಿ ನದಿ ನೀರನ್ನು ಒದಗಿಸುತ್ತಿರುವ ಕೊಡಗು ಜಿಲ್ಲೆಗೆ ಮತ್ತು ಕಾವೇರಿಯ ಉಗಮ ಸ್ಥಾನಕ್ಕೆ ಅನುದಾನ ನೀಡದಿರುವುದು ಖಂಡನೀಯ. ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಸಂಬಂಧಿಸಿದ ಅಧಿಕಾರಿಗಳು ಸರ್ಕಾರದೊಂದಿಗೆ ಚರ್ಚಿಸಿ ಜೀವನದಿ ಕಾವೇರಿಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದ ವೀಣಾ ಅಚ್ಚಯ್ಯ, ಮುಂದಿನ ದಿನಗಳಲ್ಲಿ ಪತ್ರದ ಮೂಲಕ ಮುಜರಾಯಿ ಸಚಿವರ ಗಮನಕ್ಕೆ ತರಲಾಗುವುದು ಮತ್ತು ಜಿಲ್ಲಾಧಿಕಾರಿಗಳ ಬಳಿಯೂ ಚರ್ಚಿಸುವುದಾಗಿ ತಿಳಿಸಿದರು. ವ್ಯವಸ್ಥಾಪನಾ ಸಮಿತಿ ಇಲ್ಲವೆಂಬ ಕಾರಣ ನೀಡಿ ದಿನ ದೂಡುವ ಬದಲು ಎಲ್ಲರನ್ನೂ ಒಗ್ಗೂಡಿಸಿ ನೂತನ ಸಮಿತಿ ರಚಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ ಹಾಗೂ ಅಧಿಕಾರಿಗಳು ಮಾತನಾಡಿ, ಸಿಬ್ಬಂದಿಗಳ ವೇತನಕ್ಕಾಗಿ ತಿಂಗಳಿಗೆ ರೂ.4,72,552 ಮತ್ತು ಭವಿಷ್ಯ ನಿಧಿಗಾಗಿ ರೂ.88,627 ಅಗತ್ಯವಿದೆ. ಒಟ್ಟು ಖರ್ಚು ರೂ.5,61,181 ಆಗುತ್ತಿದ್ದು, ಪ್ರಸ್ತುತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ. ಆದರೆ ಮಳೆಗಾಲದಲ್ಲಿ ತೊಂದರೆ ಎದುರಾಗಲಿದೆ ಎಂದು ಗಮನ ಸೆಳೆದರು.

ಕಾವೇರಿ ತುಲಾ ಸಂಕ್ರಮಣಕ್ಕೆ ಭಾಗಮಂಡಲ ಗ್ರಾ.ಪಂ ಗೆ ರೂ.1 ಕೋಟಿ ಅನುದಾನ ಬಂದಿದೆ. ಆದರೆ ದೇವಾಲಯಕ್ಕೆ ಯಾವುದೇ ಹಣ ದೊರೆತಿಲ್ಲ. ವಾಹನ ನಿಲುಗಡೆಯ ಹಣ ಕೂಡಾ ಗ್ರಾ.ಪಂ ಪಾಲಾಗುತ್ತಿದ್ದು, ಇದನ್ನು ದೇವಾಲಯಕ್ಕೂ ನೀಡಬೇಕೆಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!