ಅಧಿಕಾರಿಗಳ ನಿರ್ಲಕ್ಷ್ಯ: ಮಾಹಿತಿ ಚೀಟಿ ಪಡೆಯಲು ಉರಿಬಿಸಿಲಲ್ಲಿ ನಿಂತ ಮತದಾರರು

ಹೊಸದಿಗಂತ ವರದಿ ಮಡಿಕೇರಿ:

ಒಂದೆಡೆ ಶೇಕಡಾವಾರು ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೆ, ಮತ್ತೊಂದೆಡೆ ಚುನಾವಣೆಯ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಲ್ಲಿ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.

ಇದಕ್ಕೆ ತಾಜಾ ಉದಾಹರಣೆ ಬುಧವಾರ ಕುಶಾಲನಗರ ತಾಲೂಕಿನ 7ನೇ ಹೊಸಕೋಟೆಯಲ್ಲಿ ಗೋಚರಿಸಿದೆ. ಚುನಾವಣಾ ಆಯೋಗದ ಮತದಾರರ ಮಾಹಿತಿ ಪತ್ರವನ್ನು ಚುನಾವಣಾ‌ ಕರ್ತವ್ಯದಲ್ಲಿರುವ ಸಿಬ್ಬಂದಿ ಆಯಾ ಮತದಾರರ ಮನೆಗಳಿಗೆ ತಲುಪಿಸಬೇಕಿದೆ. ಆದರೆ 7ನೇ ಹೊಸಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯ ಬಿಎಲ್ಒ ಒಬ್ಬರು ಮನೆಮನೆಗೆ ತೆರಳಿ ಮತದಾರರ ಮಾಹಿತಿ ಪತ್ರ ವಿತರಿಸುವ ಬದಲು, ಪಂಚಾಯತ್‌ನ ಮುಚ್ಚಿದ ಮಳಿಗೆಯೊಂದರ ಮುಂಭಾಗದಲ್ಲಿ ಕುರ್ಚಿ, ಮೇಜು ಅಳವಡಿಸಿ ಮತದಾರರನ್ನು ತಾನಿದ್ದಲ್ಲಿಗೇ ಬಂದು ಮಾಹಿತಿ ಪತ್ರ ಪಡೆಯುವಂತೆ ಹೇಳಿ ಕಳುಹಿಸುತ್ತಿದ್ದುದು ಕಂಡು ಬಂದಿತು.

ಮಹಿಳೆಯರು,‌ ಮಕ್ಕಳು ತಮ್ಮ ಮನೆಯವರ ಮತದಾನ ಚೀಟಿ ಪಡೆಯಲು ಉರಿ ಬಿಸಿಲಲ್ಲಿ ಕಾದು ನಿಂತಿದ್ದರು. ತಾನು ಮಾತ್ರ ನೆರಳಲ್ಲಿ ಆಸೀನರಾಗಿ ಮತದಾರರ ಚೀಟಿ ಹುಡುಕುವ ಕಾರ್ಯದಲ್ಲಿ ಮಗ್ನರಾಗಿದ್ದರು. ಈ ಬಗ್ಗೆ ಬಿಎಲ್ ಒ ಅವರನ್ನು ಪ್ರಶ್ನಿಸಿದಾಗ ‘ನಾವು ಯಾರನ್ನೂ ಬರುವಂತೆ ತಿಳಿಸಿಲ್ಲ.. ಇಲ್ಲಿ ಬಂದವರಿಗೆ ಇಲ್ಲಿ ನೀಡುತ್ತಿದ್ದು, ಬರದಿರುವವರಿಗೆ ಅವರ ಮನೆಗೇ ನೀಡುತ್ತೇವೆ ಎಂಬ ಉತ್ತರ ಬಂದಿತು.

ಹಾಗಾದರೆ ಇಲ್ಲೊಮ್ಮೆ ಬರುವಂತೆ ಹೇಳುವ ಅಗತ್ಯವೇನಿತ್ತು. ಮಹಿಳೆಯರು, ಮಕ್ಕಳು ಬಿಸಿಲಲ್ಲಿ ನಿಲ್ಲುವ ಪ್ರಮೇಯವೇಕೆ ಬಂತು ? ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರ ಇಲ್ಲವಾಗಿತ್ತು.

ಒಟ್ಟಿನಲ್ಲಿ ಮತದಾರರ ಮಾಹಿತಿ ಚೀಟಿಯನ್ನು ವಿತರಿಸಿದ್ದೇವೆ ಎಂದು ತೋರಿಸುವುದಷ್ಟೇ ಅವರ ಉದ್ದೇಶ ಎಂಬುದು ಸ್ಪಷ್ಟವಾಗಿತ್ತು.
ಮತಗಟ್ಟೆಗೆ ತೆರಳಿ ಮತದಾನ ಮಾಡುವವರ ಸಂಖ್ಯೆಯೇ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಮತದಾನದ ಮಹತ್ವವನ್ನು ಜನರಿಗೆ ತಿಳಿಹೇಳಲು ಹಲವಾರು ಕಾರ್ಯಕ್ರಮಗಳನ್ನು ಚುನಾವಣಾ ಆಯೋಗ ರೂಪಿಸುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂ.ಗಳನ್ನೂ ವ್ಯಯಿಸುತ್ತಿದೆ. ಆದರೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳೇ ಸೋಮಾರಿಗಳಾದರೆ ಪ್ರಜಾಪ್ರಭುತ್ವದ ಮೌಲ್ಯ ಕುಸಿಯುವುದರಲ್ಲಿ ಸಂದೇಹವೇ ಇಲ್ಲ. ಇಂತಹ ಸೋಮಾರಿ ಅಧಿಕಾರಿ, ಸಿಬ್ಬಂದಿ ‘ಚಳಿ’ ಬಿಡಿಸುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!