ನೇಹಾ ಕುಟುಂಬಸ್ಥರಿಗೆ ಅವಮಾನ ಆಗದಂತೆ ನಡೆದುಕೊಳ್ಳಬೇಕು: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ

ಹೊಸದಿಗಂತ ವರದಿ,ಹುಬ್ಬಳ್ಳಿ:

ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಂತಹ ಪ್ರಕರಣಗಳು ನಡೆದಾಗ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಯಾರೇ ಆದರೂ ಸೂಕ್ಷ್ಮತೆಯಿಂದ ಹೇಳಿಕೆ ನೀಡುವುದು ಅವಶ್ಯಕ. ಯಾರು ಸಹ ಅವರ ಕುಟುಂಬಸ್ಥರಿಗೆ ನೋವು ಹಾಗೂ ಅವಮಾನ ಆಗದಂತೆ ನಡೆದುಕೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.

ಇಲ್ಲಿಯ ಬಿಡನಾಳದಲ್ಲಿರುವ ಮೃತ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆ ಯಾವುದೇ ಜಾತಿ, ಧರ್ಮ ಹಾಗೂ ರಾಜಕಾರಣದಂತಹ ವಿಚಾರಕ್ಕೆ ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.

ಇಂತಹ ಪ್ರಕರಣದಲ್ಲಿ ಒಬ್ಬನೆ ಆರೋಪಿ ಇರುವುದಿಲ್ಲ. ಪೊಲೀಸ್ ಸಾಕ್ಷಿ ಕಲೆಹಾಕುತ್ತ ಹೋದಂತೆ ಎಲ್ಲವೂ ಗೊತ್ತಾಗಲಿದೆ. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ನಾವೆಲ್ಲರೂ ನೇಹಾ ಹಾಗೂ ಅವರ ಕುಟುಂಬಸ್ಥರಿಗೆ ನ್ಯಾಯಾ ಸಿಗುವರೆಗೂ ನಿಲ್ಲುತ್ತೇವೆ. ತಕ್ಷಣ ಫಾಸ್ಟ್ ಟ್ರ್ಯಾಕ್ ಕೋಟ್೯ ತೆರೆದು ನ್ಯಾಯ ದೊರಕುವಂತಾಗಬೇಕು ಎಂದು ಆಗ್ರಹಿಸಿದರು.

ಶಾಲಾ- ಕಾಲೇಜಿಗೆ ಹೋದ ಮಕ್ಕಳು ಎಷ್ಟರ ಮಟ್ಟಿಗೆ ಸುರಕ್ಷತೆಯಿಂದ ಇರುತ್ತಾರೆ ಎಂಬ ಪ್ರಶ್ನೆ ಪಾಲಕರಿಗೆ ಮೂಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಮಹಿಳಾ ಆಯೋಗ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಶಾಲಾ ಕಾಲೇಜ್ ಗಳಿಗೆ ಭದ್ರತೆ ಒದಗಿಸಲು ಸೂಚನೆ ನೀಡುತ್ತೇನೆ. ಸರ್ಕಾರಕ್ಕೂ ನಾನು ಈ ಬಗ್ಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯಗಳಾಗುತ್ತಿವೆ. ದೂರು ನೀಡಲು ಹೋದರೆ ಪೊಲೀಸರು ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪ ಕೇಳಿಬಂದಿವೆ. ಸಮಸ್ಯೆ ಎಂದು ಬಂದ ಮಹಿಳೆಗೆ ಸರಿಯಾಗಿ ಸ್ಪಂದಿಸಲು ಸೂಚಿಸಲಾಗುತ್ತದೆ ಎಂದರು.

ಮಹಿಳಾ ಆಯೋಗವಿರುವುದು ರಾಜ್ಯದ ಪ್ರತಿಯೊಂದು ಮನೆ ಹಾಗೂ ಮಹಿಳೆಗೆ ಗೊತ್ತಾಗಬೇಕು. ಮುಂದೆ ಇಂತಹ ಪ್ರಕರಣಗಳು‌ ನಡೆಬಾರದು. ಇಂತಹ ಘಟನೆ ನಡೆದಾಗ ಸಾಕ್ಷಿ ಹೇಳಲು ಮುಕ್ತವಾಗಿ ಬರುವಂತಹ ವಾತಾವರಣ ನಿರ್ಮಾಣವಾಗಬೇಕು.‌ ಇದಕ್ಕೆ ಎಲ್ಲ ಸಹಕಾರ ಅವಶ್ಯಕ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕಿ ದೇವಕಿ ಯೋಗಾನಂದ ಹಾಗೂ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಪ್ ಹಳ್ಳೂರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!