ಹೊಸದಿಗಂತ ವರದಿ,ಮಂಗಳೂರು:
ಮಂಗಳೂರು- ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66 ರ ನೇತ್ರಾವತಿ ನದಿಯ ಹಳೆಯ ಸೇತುವೆ ದುರಸ್ಥಿ ಕಾಮಗಾರಿ ನಡೆಯುತ್ತಿರುವ ಪರಿಣಾಮ ಕಳೆದೆರಡು ದಿನದಿಂದ ತೊಕ್ಕೊಟ್ಟುವಿನ ಹೆದ್ದಾರಿಯಲ್ಲಿ ದಿನವಿಡೀ ಟ್ರಾಫಿಕ್ ಜಾಮ್ ಉಂಟಾಗಿದ್ದು,ಸಂಚಾರಿ ಪೊಲೀಸರು ಸಮಸ್ಯೆಗೆ ಪರ್ಯಾಯವಾಗಿ ಕಲ್ಲಾಪುವಿನಿಂದ ಮಂಗಳೂರಿಗೆ ತೆರಳಲು ಚತುಷ್ಪಥ ಹೆದ್ದಾರಿಯ ಎರಡೂ ರಸ್ತೆಗಳಲ್ಲಿ ಮುಕ್ತ ಸಂಚಾರ ಕಲ್ಪಿಸಿದ್ದರಿಂದ ವಾಹನಸವಾರರು ನಿರಾಳರಾಗಿದ್ದಾರೆ.
ಮಂಗಳೂರು ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ಕಾಮಗಾರಿ ವೇಗಗತಿಯಲ್ಲಿ ಮುಗಿಸುವ ಉದ್ದೇಶದಿಂದ ಬದಲಿ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.
ಮಂಗಳೂರು ನಗರ ಸಂಚಾರ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸಂಚಾರಕ್ಕೆ ತೀರಾ ಅಡಚಣೆಯಾಗುವುದರಿಂದ ಸೇತುವೆಯ ಬಳಿಯ ತೆರೆದ ವಿಭಜಕದಮೂಲಕ ಪೂರ್ವ ರಸ್ತೆಯನ್ನು (ಮತ್ತೊಂದು ಕಡೆಯ ರಸ್ತೆಯಲ್ಲಿ) ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದ್ದರಿಂದ ಸಾರ್ವಜನಿಕರು, ವಾಹನ ಚಾಲಕರು/ಸವಾರರು ಎಚ್ಚರಿಕೆ ವಹಿಸಬೇಕು ಬದಲಿ ರಸ್ತೆಯಲ್ಲಿಯೇ ಕೆಲ ದಿನಗಳ ಕಾಲ ಸಂಚರಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.