ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ತಾಲೂಕಿನ ವಿ.ಸಿ ಫಾರ್ಮ್ ನಲ್ಲಿ ನೂತನ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ.
ಕಳೆದ ಮಾರ್ಚ್ ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ನೂತನ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ಉಭಯ ಸದನಗಳಲ್ಲಿ ವಿಧೇಯಕವನ್ನು ಅಂಗೀಕರಿಸಿ ರಾಜ್ಯಪಾಲರ ಸಹಮತಿಗೆ ಕಳುಹಿಸಲಾಗಿತ್ತು. ಮಂಡ್ಯ ಕೃಷಿ ವಿಶ್ವವಿದ್ಯಾಲಯ ವಿಧೇಯಕದ ಬಗ್ಗೆ ಚರ್ಚಿಸಿ ರಾಜ್ಯಪಾಲರಿಗೆ ಸಹಮತಿ ನೀಡುವಂತೆ ಸಚಿವ ಚಲುವರಾಯಸ್ವಾಮಿ ಮನವಿ ಸಲ್ಲಿಸಿದರು.
ಮನವಿ ಪುರಸ್ಕರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿಧೇಯಕಕ್ಕೆ ಸಹಮತಿ ನೀಡಿ ಅನುಮೋದಿಸಿದ್ದಾರೆ. ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಮೊದಲ ಕುಲಪತಿಗಳನ್ನು ರಾಜ್ಯಪಾಲರು ನೇಮಕ ಮಾಡಲಿದ್ದಾರೆ.