ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ನೂತನ ಮುಖ್ಯಮಂತ್ರಿ ಯಾರೆಂದು ಕೆಲವೇ ಗಂಟೆಯಲ್ಲಿ ತಿಳಿಯಲಿದ್ದು, ಈ ನಡುವೆ ನಾಳೆ ನಡೆಯುವ ಪ್ರಮಾಣವಚನ ಸಮಾರಂಭದ ಸಿದ್ಧತೆ ಭರದಿಂದ ಸಾಗುತ್ತಿದೆ.
ಇತ್ತ ಗುರುವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ ಅವರಿಗೆ ಆಹ್ವಾನ ಕಳುಹಿಸಿರುವುದಾಗಿ ಬಿಜೆಪಿ ತಿಳಿಸಿದೆ.
ಮುಖ್ಯಮಂತ್ರಿ ಹುದ್ದೆಗೆ ಅಭ್ಯರ್ಥಿಯನ್ನು ಬಿಜೆಪಿ ಇನ್ನೂ ಘೋಷಿಸಿಲ್ಲ. ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳುವ ಮೊದಲೇ ದೆಹಲಿಯ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಹೆಸರನ್ನು ಅಂತಿಮಗೊಳಿಸಲಾಗುವುದು. ಫೆಬ್ರವರಿ 20ರಂದು ಮಧ್ಯಾಹ್ನ 12 ಗಂಟೆಗೆ ಪ್ರಮಾಣವಚನ ಸ್ವೀಕಾರ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ಸಮಾರಂಭಕ್ಕೆ ದೆಹಲಿಯ ನಿರ್ಗಮಿತ ಮುಖ್ಯಮಂತ್ರಿ ಅತಿಶಿ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ಅವರಿಗೆ ವೀರೇಂದ್ರ ಸಚ್‌ದೇವ ಆಹ್ವಾನ ಕಳುಹಿಸಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ಬಿಜೆಪಿಯು ಕ್ಯಾಬ್ ಚಾಲಕರು, ಆಟೋ ಚಾಲಕರು, ಗಿಗ್ ಕೆಲಸಗಾರರು, ಕೊಳೆಗೇರಿಗಳ ಜನರನ್ನು ಕೂಡ ನಾಳೆಯ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಿದೆ.
ರಾಮಲೀಲಾ ಮೈದಾನದಲ್ಲಿ 5000 ಭದ್ರತೆಯನ್ನು ನಿಯೋಜಿಸಲಾಗಿದೆ. ದೆಹಲಿಯ ಹೊಸ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದ ದಿನದಂದು ರಾಮಲೀಲಾ ಮೈದಾನ ಪ್ರದೇಶದಲ್ಲಿ ಮತ್ತು ಸುತ್ತಮುತ್ತ 5,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಳೆಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟ ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ದೆಹಲಿಯ ಜನರು ಮೋದಿಗೆ ಜನಾದೇಶ ನೀಡಿದ್ದಾರೆ. ಬಿಜೆಪಿ ಸರ್ಕಾರ ರಚಿಸಲು ಉತ್ಸುಕವಾಗಿದೆ ಎಂದು ಬಿಜೆಪಿ ಘೋಷಿಸಿದೆ.