ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್​ನಲ್ಲಿ ಅಕ್ರಮ ಆರೋಪ: ಹೈಕೋರ್ಟ್​​ನಿಂದ ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಎದುರಾಗಿದೆ. 16ನೇ ಬೆಂಗಳೂರು ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​ಗೆ ಸಕಲ ಸಿದ್ಧತೆ ನಡೆದಿದೆ. ಅದರ ಬೆನ್ನಲ್ಲೇ ವಿವಾದ ಸೃಷ್ಟಿ ಆಗಿದೆ. ಸಿನಿಮಾಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಹಲವರು ತಕರಾರು ತೆಗೆದಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್​ನಲ್ಲಿ ಸಿನಿಮಾಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿದೆ. 9 ಸಿನಿಮಾ ನಿರ್ಮಾಣ ಸಂಸ್ಥೆಗಳಿಂದ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆ ಆಗಿದೆ. ತಮ್ಮ ಸಿನಿಮಾಗಳನ್ನು ಫಿಲ್ಮ್ ಫೆಸ್ಟಿವಲ್​ಗೆ ಪರಿಗಣಿಸಿಲ್ಲ. ಸಿನಿಮಾಗಳನ್ನು ವೀಕ್ಷಿಸದೇ ಆಯ್ಕೆ ಅಂತಿಮಗೊಳಿಸಲಾಗಿದೆ ಎಂದು ನಿರ್ಮಾಣ ಸಂಸ್ಥೆಗಳು ಆರೋಪಿಸಿವೆ.

ಮಾರ್ಚ್​ 1ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಆರಂಭ ಆಗಲಿದೆ. ಆದರೆ ಆಯ್ಕೆ ಪ್ರಕ್ರಿಯೆ ಸರಿಯಾಗಿ ಆಗಿಲ್ಲ ಎಂಬ ಕಾರಣದಿಂದ ಫಿಲ್ಮ್ ಫೆಸ್ಟಿವಲ್​ ಮುಂದೂಡಬೇಕು ಎಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದಾರೆ.

ಅರ್ಜಿದಾರರ ಪರ ವಕೀಲ‌ ಜಿ.ಆರ್. ಮೋಹನ್ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಈ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಫೆಬ್ರವರಿ 24ರಂದು ಹೈಕೋರ್ಟ್ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಬೆಂಗಳೂರು ಇಂಟರ್​ನ್ಯಾಷನಲ್ ಫಿಲ್ಮ್​ ಫೆಸ್ಟಿವಲ್​ನ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸ್ಪರ್ಧಾತ್ಮಕ ವಿಭಾಗಕ್ಕೆ ಸಲ್ಲಿಕೆಯಾಗಿರುವ ಸಿನಿಮಾಗಳನ್ನು ಪೂರ್ಣವಾಗಿ ವೀಕ್ಷಿಸದೇ ತಿರಸ್ಕರಿಸಿರುವುದು ಗಂಭೀರ ಲೋಪ. ಚಿತ್ರೋತ್ಸವಕ್ಕೆ, ಸರ್ಕಾರ ಸಾರ್ವಜನಿಕರ ಹಣ ನೀಡುವುದು ಅಕಾಡೆಮಿ ಮತ್ತು ಚಿತ್ರೋತ್ಸವ ಸಮಿತಿ ತಮ್ಮ ಮನಸೋ ಇಚ್ಛೆಯಂತೆ ವರ್ತಿಸಿ, ನಿಯಮಗಳನ್ನು ಗಾಳಿಗೆ ತೂರಿ ನಡೆಸುವುದಕ್ಕಲ್ಲ. ಈ ಆರೋಪಕ್ಕೆ ಅಕಾಡೆಮಿ ಮತ್ತು ಚಿತ್ರೋತ್ಸವ ಸಮಿತಿ ವಿವರಣೆ ನೀಡಲೇಬೇಕು’ ಎಂದು ಖ್ಯಾತ ನಿರ್ದೇಶಕ ಮಂಸೋರೆ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

‘ತಿಂಗ್ಳ್ ಬೆಳ್ಕ್’ ಸಿನಿಮಾದ ನಿರ್ದೇಶಕ ನರೇಶ್ ಹೆಗಡೆ ಕೂಡ ಈ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ‘ನಾಳೆ ರಜಾ ಕೋಳಿ ಮಜಾ’ ಸಿನಿಮಾದ ನಿರ್ದೇಶಕ ಅಭಿಲಾಶ್ ಶೆಟ್ಟಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫಿಲ್ಮ್​ ಫೆಸ್ಟಿವಲ್​ನಲ್ಲಿ ಸಿನಿಮಾಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಸ್ಪಷ್ಟನೆ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!