ದೆಹಲಿ ರೈಲು ನಿಲ್ದಾಣಕ್ಕೆ ಅತ್ಯಾಕರ್ಷಕ ರೂಪ: ಹೊಸ ವಿನ್ಯಾಸ ನೋಡಿ ಬೆರಗಾದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಭಾರತದ ರೈಲ್ವೆಯ ಅತಿದೊಡ್ಡ ನಿಲ್ದಾಣವಾದ ರಾಷ್ಟ್ರ ರಾಜಧಾನಿ ದೆಹಲಿ ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ ನೀಡಲು ರೈಲ್ವೆ ಇಲಾಖೆ ಯೋಜನೆ ಹಾಕಿಕೊಂಡಿದ್ದು, ರೈಲ್ವೆ ನಿಲ್ದಾಣದ ನೋಟ ಶೀಘ್ರದಲ್ಲೇ ಬದಲಾಗಲಿದೆ. ನಗರದ ಹೃದಯ ಭಾಗದಲ್ಲಿ ಬೃಹತ್‌ ಗೋಪುರಗಳಿರುವ ಅತ್ಯಾಧುನಿಕ ಶೈಲಿಯಲ್ಲಿ ದಿಲ್ಲಿಯ ಹೊಸ ರೈಲು ನಿಲ್ದಾಣವು ರೂಪುಗೊಳ್ಳಲಿದೆ. ಇದಕ್ಕಾಗಿ ಬರೋಬ್ಬರಿ 4,700 ಕೋಟಿ ರೂ.ಗಳ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ದೆಹಲಿ ನಿಲ್ದಾಣದಲ್ಲಿ ಪ್ರತಿನಿತ್ಯ ಸುಮಾರು 5 ಲಕ್ಷ ಜನ ಸಂಚಾರ ಮಾಡುತ್ತಾರೆ. ಈ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿಲ್ದಾಣದ ನವೀಕರಣಕ್ಕೆ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಪುನರಾಭಿವೃದ್ಧಿ ಮಾಡಲಿರುವ ನವ ದೆಹಲಿ ರೈಲ್ವೆ ನಿಲ್ದಾಣ (ಎನ್​ಡಿಎಲ್​ಎಸ್​) ಪ್ರಸ್ತಾವಿತ ವಿನ್ಯಾಸದ ಚಿತ್ರಗಳನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದೆ. ನಿಲ್ದಾಣದ ಹೊಸ ವಿನ್ಯಾಸ ಅದ್ಭುತವಾಗಿ ತೋರುತ್ತಿದ್ದು ಜನರ ಗಮನ ಹಿಡಿದಿಟ್ಟುಕೊಂಡಿದೆ.
ಅಂತಾರರಾಷ್ಟ್ರೀಯ ಗುಣಮಟ್ಟದಲ್ಲಿ ಆಕರ್ಷಕವಾಗಿ ಮೂಡಿಬರಲಿದೆ ಹೊಸದಿಲ್ಲಿ ರೈಲು ನಿಲ್ದಾಣ
ರೈಲ್ವೆ ಸಚಿವಾಲಯ ಹಂಚಿಕೊಂಡಿರುವ ಚಿತ್ರಗಳನ್ನು ಗಮನಿಸಿದರೆ ಎರಡು ಗುಮ್ಮಟಗಳು ಗೋಚರಿಸುತ್ತವೆ. ಮುಖ್ಯ ನಿಲ್ದಾಣದ ಸಂಕೀರ್ಣವು ತಲಾ ಆರು ಮಹಡಿಗಳಿದ್ದು, ಈ ಗುಮ್ಮಟಗಳನ್ನು ಹೊಂದಿರುತ್ತದೆ. ಒಂದು ಗುಮ್ಮಟ ದೊಡ್ಡದಾಗಿದೆ ಮತ್ತು ಇನ್ನೊಂದು ಚಿಕ್ಕದಾಗಿದೆ. ಗುಮ್ಮಟಗಳ ಎತ್ತರವು ನೆಲದಿಂದ ಕ್ರಮವಾಗಿ 80 ಮೀ ಮತ್ತು 60 ಮೀ ಆಗಿರುತ್ತದೆ.

ಇಲ್ಲಿನ ಪ್ರಯಾಣಿಕರಿಗೆ ಹಲವಾರು ವಿಶ್ವದರ್ಜೆಯ ಸೌಲಭ್ಯಗಳು ದೊರೆಯಲಿವೆ. ಪ್ರಯಾಣಿಕರಿಗಾಗಿ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ಪ್ರದೇಶಗಳಿರುತ್ತವೆ. ನಿಲ್ದಾಣದ ಸೇವಾ ಪ್ರದೇಶವು 2.2 ಲಕ್ಷ ಚದರ ಮೀಟರ್ ನೆಲದ ಜಾಗದಲ್ಲಿ ಹರಡಿರುತ್ತವೆ.
ಹೊಸ ನಿಲ್ದಾಣವು 9 ಮೀ ಅಗಲದ ಎರಡು ಸ್ಕೈವಾಕ್‌ಗಳನ್ನು ಹೊಂದಿರುತ್ತದೆ. ನಿಲ್ದಾಣದೊಳಗೆ 86 ಲಿಫ್ಟ್‌ಗಳು ಮತ್ತು 67 ಎಸ್ಕಲೇಟರ್‌ಗಳಿರುತ್ತವೆ. ಕಟ್ಟಡಕ್ಕೆ ವಿದ್ಯುತ್‌ ಸೌಲಭ್ಯ ಒದಗಿಸಲು ಕಟ್ಟಡದ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಇರಿಸಲಾಗುತ್ತದೆ.
ಮಳೆನೀರು ಕೊಯ್ಲು, ತ್ಯಾಜ್ಯನೀರು ಮರುಬಳಕೆ ಮತ್ತು ಘನ ತ್ಯಾಜ್ಯ ನಿರ್ವಹಣೆಗೆ ಸೂಕ್ತವಾದ ವ್ಯವಸ್ಥೆಗಳನ್ನು ಹೊಂದಿರುತ್ತದೆ. ಈ ಯೋಜನೆಗ ಖಾಸಗಿ ಬಂಡವಾಳಕ್ಕೆ ಕಾಯದೆ ಸಂಪೂರ್ಣವಾಗಿ ಸರಕಾರದ ಬೊಕ್ಕಸದಿಂದ ಹಣ ನೀಡಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!