ಇದು ಭಾರತದ ಭುಜಕೀರ್ತಿ! ನೌಕಾಸೇನೆಯ ಅಡ್ಮಿರಲ್ ಶ್ರೇಣಿಯಲ್ಲಿ ಬ್ರಿಟಿಷ್ ಕುರುಹು ಇಲ್ಲವಾಗಿಸಿದ ಬದಲಾವಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತದ ನೌಕಾಸೇನೆಯಲ್ಲಿ ಅಡ್ಮಿರಲ್ ಶ್ರೇಣಿಯ ಅಧಿಕಾರಿಗಳು ಧರಿಸುವ ಭುಜಕೀರ್ತಿಯ ಹೊಸ ವಿನ್ಯಾಸವನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ.

ಭುಜಕೀರ್ತಿ ಎಂದರೆ, ಅಧಿಕಾರಿಗಳು ತಮ್ಮ ತೋಳಿನ ಮೇಲೆ ತಮ್ಮ ಶ್ರೇಣಿಗಳನ್ನು ಸೂಚಿಸುವ ನಿಟ್ಟಿನಲ್ಲಿ ಧರಿಸುವ ಅಲಂಕಾರ. ಈವರೆಗೆ ಅಡ್ಮಿರಲ್ ಶ್ರೇಣಿಯ ನೌಕಾಧಿಕಾರಿಗಳ ಭುಜದ ಮೇಲೆ ಕಾಣುತ್ತಿದ್ದದ್ದು ಬ್ರಿಟಿಷ್ ಕಾಲದ ನೆಲ್ಸನ್ ರಿಂಗ್. ರಾಯಲ್ ನೇವಿಯ ಹೊರಾಶಿಯೊ ನೆಲ್ಸನ್ ಎಂಬ ಅಧಿಕಾರಿಯ ಸ್ಮರಣಾರ್ಥ ಅಂಗೀಕೃತಗೊಂಡಿದ್ದ ಭುಜಕೀರ್ತಿ ಅದು. ಆ ಬ್ರಿಟಿಷ್ ಅಧಿಕಾರಿ ತಾನು ಯುದ್ಧಕ್ಕೆ ತೆರಳುವ ಮುನ್ನ ಹೆಂಡತಿಗೆ ತೊಡಿಸಿದ್ದ ಉಂಗುರ ಆ ರೀತಿಯಿತ್ತು ಎಂಬುದು ಅದರ ಹಿಂದಿನ ಕತೆ.

ಭಾರತದ ಆಡಳಿತ ವ್ಯವಸ್ಥೆಯಲ್ಲಿರುವ ಇಂಥ ಅನೇಕ ಗುಲಾಮಿ ಚಿಹ್ನೆಗಳನ್ನು ಬದಲಿಸುತ್ತಾ ಭಾರತೀಯತೆಯ ಗುರುತು ಮರುಪ್ರತಿಷ್ಠಾಪಿಸಬೇಕೆಂಬ ಪ್ರಯತ್ನ ಮೋದಿ ಸರ್ಕಾರದ್ದು. 2022ರಲ್ಲಿ ನೌಕಾಲಾಂಛನದಲ್ಲಿದ್ದ ಸಂತ ಜಾರ್ಜ್ ಶಿಲುಬೆಯನ್ನು ಬದಲಿಸಲಾಗಿತ್ತು. ಕೆಲವು ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಿಂಧುದುರ್ಗದ ಕಾರ್ಯಕ್ರಮವೊಂದರಲ್ಲಿ ನೌಕಾಸೇನೆಯ ಅಡ್ಮಿರಲ್ ಭುಜಕೀರ್ತಿ ಬದಲಾಗಲಿದೆ ಎಂದಿದ್ದರು. ಅದೀಗ ಅನುಷ್ಠಾನವಾಗಿದೆ. 

ಬ್ರಿಟಿಷರ ಕಾಲದ ಭುಜಕೀರ್ತಿಯನ್ನು ಬದಲಿಸಿರುವ ಈ ವಿನ್ಯಾಸ ಮೂಲತಃ ಶಿವಾಜಿ ಮಹಾರಾಜರ ಕಾಲದ ಮುದ್ರೆಗಳಿಂದ ಸ್ಫೂರ್ತಿ ಪಡೆದಿದೆ. ಶಿವಾಜಿ ಮಹಾರಾಜರು ಭಾರತದಲ್ಲಿ ಸಶಕ್ತ ನೌಕಾಸೇನೆ ಕಟ್ಟಿದ್ದರು ಎಂಬುದಿಲ್ಲಿ ಸ್ಮರಣಾರ್ಹ. 

ಭಾರತದ ರಾಷ್ಟ್ರಲಾಂಛನವೂ ಸೇರಿದಂತೆ ಹಲವು ಅಂಶಗಳು ಹೊಸ ಭುಜಕೀರ್ತಿಯ ಭಾಗವಾಗಿವೆ. ಅವುಗಳ ವಿವರಗಳು ಇಲ್ಲಿವೆ.

ಮುಂದಿನ ಹಂತದಲ್ಲಿ, ಬ್ರಿಟಿಷ್ ಪರಿಕಲ್ಪನೆಗಳನ್ನು ಹೊಂದಿರುವ ನೌಕಾಧಿಕಾರಿಗಳ ಪದನಾಮಗಳು ಸಹ ಭಾರತೀಯ ಪರಿಕಲ್ಪನೆಗೆ ತಕ್ಕಂತೆ ಬದಲಾಗಲಿವೆ. 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!