Friday, November 21, 2025

ಕುರ್ಚಿಯಾಟದಲ್ಲಿ ಹೊಸ ಆಯಾಮ: ಡಿಕೆಶಿ ಆಪ್ತರಿಂದ ದೆಹಲಿ ಭೇಟಿ, ‘ಕೈ’ ಪಾಳಯದಲ್ಲಿ ತಲ್ಲಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ನಡೆಯುತ್ತಿರುವಾಗಲೇ ಕರ್ನಾಟಕದ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗ ಶಾಸಕರು ಮತ್ತು ಸಚಿವರ ತಂಡವೊಂದು ದಿಢೀರನೇ ದೆಹಲಿಗೆ ಪ್ರಯಾಣ ಬೆಳೆಸಿದೆ.

ಇಂದು ಒಟ್ಟು ಎಂಟು ಜನರ ತಂಡ ದೆಹಲಿಗೆ ಹಾರಿದ್ದು, ಹೈಕಮಾಂಡ್ ಎದುರು ತಮ್ಮ ಬಲ ಪ್ರದರ್ಶನ ಮಾಡುವ ಇರಾದೆ ಹೊಂದಿದೆ. ಸಚಿವರಾದ ಚೆಲುವರಾಯಸ್ವಾಮಿ, ಇಕ್ಬಾಲ್ ಹುಸೇನ್, ಹಾಗೂ ಶಾಸಕರಾದ ಮಾಗಡಿ ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ, ರವಿ ಗಣಿಗ, ಉದಯ್ ಗೌಡ ಸೇರಿದಂತೆ ಇತರೆ ಪ್ರಮುಖರು ಈ ತಂಡದಲ್ಲಿ ಸೇರಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ನಿಯೋಗವು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಸಮಯ ಕೇಳಿದೆ.

ಇದಲ್ಲದೆ, ಇಂದು ಒಂದು ತಂಡ ಪ್ರಯಾಣ ಬೆಳೆಸಿದ್ದರೆ, ನಾಳೆ (ಶುಕ್ರವಾರ) ಮತ್ತೊಂದು ಏಳು ಜನರ ತಂಡವು ದೆಹಲಿಗೆ ತೆರಳಲು ಸಿದ್ಧತೆ ನಡೆಸಿದೆ. ಡಿಕೆ ಶಿವಕುಮಾರ್ ಬೆಂಬಲಿಗರ ಈ ದಿಢೀರ್ ದೆಹಲಿ ಯಾತ್ರೆಯು ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

error: Content is protected !!