ಈ ವರ್ಷದಿಂದಲೇ ಆಯ್ದ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಆರಂಭ: ಸಚಿವ ಬಿ.ಸಿ.ನಾಗೇಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಔನತ್ಯಕ್ಕೆ ಹೆಚ್ಚು ಅನುಕೂಲಕರವಾಗಿದೆ.ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಆಯ್ದ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ಣವಾಗಿ ರಾಜ್ಯಾದ್ಯಂತ ಆರಂಭಿಸುತ್ತೇವೆ.ಆರನೇ ತರಗತಿಯಿಂದ ವರ್ಷದಿಂದ ೮ನೇ ತರಗತಿ ತನಕದವರಿಗೆ ನೂತನ ಶಿಕ್ಷಣ ನೀತಿ ಪ್ರಕಾರ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾಗಲಿದೆ.ಈಗಾಗಲೇ ಈ ಬಗ್ಗೆ ಕೇಂದ್ರದಿಂದ ನೀಲನಕಾಶೆ ಬಂದಿದೆ.ಇದರ ನಿಯಮಗಳಿಗೆ ಅನುಸಾರವಾಗಿ ರಾಜ್ಯದಲ್ಲಿ ತನ್ನದೇ ಆದ ನೀಲ ನಕಾಶೆ ಸಿದ್ದಪಡಿಸಿ ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ನೂತನ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದರು.

ಈ ವರ್ಷ ೪೦೦-೫೦೦ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಆರಂಭವಾಗಲಿದೆ ಎಂದರು.ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳು ಈ ಹಿಂದಿನಂತೆಯೇ ನಡೆಯಲಿದೆ. ಈಗಾಗಲೇ ದಿನಾಂಕ ಘೋಷಿಸಲಾಗಿದೆ. ಪರೀಕ್ಷಾ ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದರು.

ಮಕರ ಸಂಕ್ರಾಂತಿ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ೧೪ರ ಬದಲು ೧೫ಕ್ಕೆ ರಜೆ ನೀಡಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವರ್ಷದಲ್ಲಿ ಐದು ರಜೆಗಳನ್ನು ನೀಡುವ ಅವಕಾಶ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಅದರಂತೆ ಅವರು ರಜೆ ನೀಡುತ್ತಾರೆ. ರಜೆ ನೀಡುವಲ್ಲಿಯೂ ಕೆಲವೊಂದು ಬದಲಾವಣೆ ಮಾಡಲಾಗಿದೆ. ಅತಿಥಿ ಶಿಕ್ಷಕರಿಗೆ ವೇತನ ಪಾವತಿ ಆಗದೇ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಒಂದೆರಡು ತಿಂಗಳು ತಡ ಆಗಬಹುದು ಅಥವಾ ಆರಂಭದಲ್ಲಿ ತಡ ಆಗಬಹುದು ಹೊರತು ವೇತನ ಪಾವತಿ ಆಗದೇ ಇರುವುದಿಲ್ಲ ಎಂದರು.
ಸಚಿವ ಎಸ್.ಅಂಗಾರ ಜತೆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!