ಹೊಸದಿಗಂತ ವರದಿ ಬೆಳಗಾವಿ:
ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಕಟ್ಟಡಗಳು ನಮ್ಮ ನಾಡಿನ ಶಿಕ್ಷಣ ಹಾಗೂ ಸಾಮಾಜಿಕ ಪರಂಪರೆಗೆ ಸಾಕ್ಷಿಯಾಗಿವೆ.
ಆದರೆ ಕೆಲವು ಕಟ್ಟಡಗಳು ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡು, ಕಾಲಕ್ರಮೇಣ ಶಿಥಿಲಾವಸ್ಥೆಗೆ ತಲುಪಿ ಪಾಳು ಬಿದ್ದ ಇಂತಹ ಕಟ್ಟಡಗಳನ್ನು ತೆರವುಗೊಳಿಸಿ ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಕಾರ್ಯ ನಿಜಕ್ಕೂ ಶ್ಲಾಘನೀಯ.
ಇದಕ್ಕೆ ಉತ್ತಮ ಉದಾಹರಣೆಯಾಗಿ ಬೆಳಗಾವಿಯ ಕಾಕತಿ ವೇಸ್ ರಸ್ತೆಯಲ್ಲಿನ ಸರ್ಕಾರಿ ಸರ್ದಾರ್ಸ್ ಪ್ರೌಢ ಶಾಲಾ ಆವರಣದಲ್ಲಿ ಹಲವಾರು ವರ್ಷಗಳಿಂದ ಶಿಥಿಲಗೊಂಡು ನಿರುಪಯೋಗಿಯಾಗಿ ಬಿದ್ದಿದ್ದ ಹಳೆಯ ಕಟ್ಟಡವನ್ನು ತೆರವು ಗೊಳಿಸಿ ಅದೇ ಸ್ಥಳದಲ್ಲಿ ಅತ್ಯಂತ ಆಕರ್ಷಕವಾಗಿ ನಿರ್ಮಾಣಗೊಂಡಿರುವ ಚೆಸ್ ಪಾರ್ಕ್ ಗಮನ ಎಲ್ಲರ ಸೆಳೆಯುತ್ತಿದೆ.
ಸುಮ್ಮನೇ ಪಾಳುಬಿದ್ದಿರುವ ಕಟ್ಟಡ ತೆರವುಗೊಳಿಸಿ ವಿದ್ಯಾರ್ಥಿಗಳೆಲ್ಲರಿಗೆ ಉಪಯೋಗವಾಗುವಂತೆ ಏನನ್ನಾದರೂ ನಿರ್ಮಿಸಬಹುದಲ್ಲ ಎಂಬ ತಮ್ಮ ಪರಿಕಲ್ಪನೆಗೆ ತಮ್ಮದೇ ಶಾಸಕರ ಅನುದಾನ ನೀಡಿಕೆ ಮೂಲಕ ಜೀವ ತುಂಬಿದವರು ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಆಸೀಫ್ ರಾಜು ಸೇಠ ರವರು ತಕ್ಷಣ ಸ್ಪಂದಿಸಿ, ಇದರ ರೂಪು ರೇಷೆಗೆ ಮಾರ್ಗದರ್ಶನ ನೀಡಿ ವಿಶಿಷ್ಟ ವಿನ್ಯಾಸದ ಚೆಸ್ ಪಾರ್ಕ್ ನಿರ್ಮಿಸಲು ಚಾಲನೆ ನೀಡುವ ಮೂಲಕ ಕಲ್ಪನೆಯನ್ನು ಸಾಕಾರಗೊಳಿಸಿದವರು.
ಜಿಲ್ಲಾ ಪಂಚಾಯತ್ ನ ಮಾದರಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಗಿರುವ ರಾಹುಲ್ ಶಿಂಧೆಯವರು ಒಮ್ಮೆ ಹಳೆಯದಾಗಿ, ಬಳಕೆಗೆ ಅಷ್ಟಾಗಿ ಯೋಗ್ಯವಾಗಿರದಂತೆ ಕಾಣುತ್ತಿದ್ದ ಕಟ್ಟಡ ತೆರವು ಗೊಳಿಸಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಸುಂದರವಾಗಿ ಅಭಿವೃದ್ಧಿಪಡಿಸಿ, ಮಕ್ಕಳಿಗೆ ಅನುಕೂಲವಾಗುವಂತೆ ಚೆಸ್ ಪಾರ್ಕ್ ರೂಪಿಸಿರುವುದು ಗಮನಾರ್ಹ. ಹಸಿರು ಪರಿಸರ, ಮರಗಳ ನೆರಳು, ಕುಳಿತುಕೊಳ್ಳಲು ಕೆಂಪು ಬೆಂಚುಗಳು ಹಾಗೂ ಮಕ್ಕಳನ್ನು ಆಕರ್ಷಿಸುವ ವ್ಯವಸ್ಥೆಗಳೊಂದಿಗೆ ಈ ಸ್ಥಳಕ್ಕೆ ಹೊಸ ಕಳೆ ಬಂದಿದೆ.
ಚೆಸ್ ಕೇವಲ ಒಂದು ಆಟವಲ್ಲ. ಅದು ಮಕ್ಕಳಲ್ಲಿ ಏಕಾಗ್ರತೆ, ತಾರ್ಕಿಕ ಚಿಂತನೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ತಾಳ್ಮೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯವನ್ನು ಬೆಳೆಸುವ ಬೌದ್ಧಿಕ ಕ್ರೀಡೆಯಾಗಿದೆ. ಆದ್ದರಿಂದ ಶಾಲಾ ಮಕ್ಕಳಿಗೆ ಚೆಸ್ ಕಲಿಯಲು ಹಾಗೂ ಅಭ್ಯಾಸ ಮಾಡಲು ಇಂತಹ ಸಾರ್ವಜನಿಕ ಸ್ಥಳಗಳು ಬಹಳ ಉಪಯುಕ್ತವಾಗುತ್ತವೆ.
ಹಳೆಯದರಿಂದ ಹೊಸತನದತ್ತ
ಒಂದು ಕಾಲದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸ್ಥಳವೊಂದು ಇಂದು ಮಕ್ಕಳನ್ನು ಆಕರ್ಷಿಸುವ ಬೌದ್ಧಿಕ ಕ್ರೀಡಾ ತಾಣವಾಗಿ ರೂಪುಗೊಂಡಿರುವುದು ನಿಜಕ್ಕೂ ಮಾದರಿಯಾಗಿದೆ. ಇದರಿಂದ ಒಂದು ಮಹತ್ವದ ಸಂದೇಶವೂ ದೊರೆಯುತ್ತದೆ
ಮಕ್ಕಳ ಭವಿಷ್ಯಕ್ಕೆ ಉತ್ತಮ ಹೂಡಿಕೆ
ಇಂತಹ ಚೆಸ್ ಪಾರ್ಕ್‌ಗಳು ಮಕ್ಕಳಿಗೆ ಮೊಬೈಲ್ ಮತ್ತು ಇತರ ಡಿಜಿಟಲ್ ಸಾಧನಗಳಿಂದ ಸ್ವಲ್ಪ ದೂರವಿದ್ದು, ನೇರವಾಗಿ ಪರಸ್ಪರ ಆಟವಾಡಲು ಹಾಗೂ ಕಲಿಯಲು ಅವಕಾಶ ಕಲ್ಪಿಸುತ್ತವೆ. ಶಾಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಪಡೆಯುವಂತಾದರೆ, ಶೈಕ್ಷಣಿಕ–ಬೌದ್ಧಿಕ-ಕ್ರೀಡಾ ಶಕ್ತಿಯಾಗಿ ಬೆಳೆಯಬಹುದು.
“ಸ್ಥಳವೊಂದು ಬದಲಾಗುವುದರಿಂದ ಮಾತ್ರ ಅಭಿವೃದ್ಧಿಯಾಗುವುದಿಲ್ಲ; ಅದರ ಸದುಪಯೋಗದಿಂದ ಮಕ್ಕಳು ಬದಲಾಗಬೇಕು.” ಈ ಚೆಸ್ ಪಾರ್ಕ್ ಅಂತಹ ಬದಲಾವಣೆಯ ಒಂದು ಸುಂದರ ಉದಾಹರಣೆಯಾಗಿದೆ.
ಇಂತಹ ಮಾದರಿ ಮತ್ತು ಕ್ರಿಯಾಶೀಲ ನಿರ್ಮಾಣಕ್ಕೆ ಕಾರಣಿಕರ್ತರಾದ ಶಾಸಕ ಆಸೀಫ್ ಸೇಠ್ ರವರಿಗೆ ಹಾಗೂ ಸದಾ ಶೈಕ್ಷಣಿಕ ಪ್ರಗತಿ ಮತ್ತು ಅಭಿವೃದ್ಧಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ರಾಹುಲ್ ಶಿಂಧೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಮೂಲಕ ನೂತನವಾಗಿ ನಿರ್ಮಾಣಗೊಂಡಿರುವ ಈ ಚೆಸ್ ಪಾರ್ಕ್ ಇಂದು ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ.



