ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಶುರು: ‘ಡೆಮಾಕ್ರಟಿಕ್‌ ಆಜಾದ್‌ ಪಕ್ಷ’ ಘೋಷಿಸಿದ ಗುಲಾಂ ನಬಿ ಆಜಾದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್‌ ನಿಂದ ಹೊರಬಂದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ‘ಡೆಮಾಕ್ರಟಿಕ್‌ ಆಜಾದ್‌ ಪಕ್ಷ’ (Democratic Azad Party) ಎಂಬ ಹೊಸ ಪ್ರಾದೇಶಿಕ ಪಕ್ಷ ಆರಂಭಿಸಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ ಆಜಾದ್‌, ತಮ್ಮ ಪಕ್ಷದ ಹೆಸರನ್ನು ಘೋಷಿಸಿದರು. ಕಳೆದ ತಿಂಗಳು ಕಾಂಗ್ರೆಸ್‌ ನಂಟನ್ನು ಕಳಚಿಕೊಂಡಿದ್ದ ಆಜಾದ್‌, ರಾಹುಲ್‌ ಗಾಂಧಿ ವಿರುದ್ಧ ಕೆಂಡಾಮಂಡಲವಾಗಿದ್ದರು. ಬಹಿರಂಗ ಪತ್ರ ಬರೆದು ರಾಹುಲ್‌ ಗಾಂಧಿ ನಡೆಯನ್ನು ಕಟುವಾಗಿ ಟೀಕಿಸಿ ರಾಜೀನಾಮೆ ನೀಡಿದ್ದರು. ಅದಾದ ನಂತರ ಸ್ವಂತ ಪಕ್ಷ ಕಟ್ಟುವುದಾಗಿ ಮಾಹಿತಿ ನೀಡಿದ್ದರು.

ಇಂದು ಪಕ್ಷದ ಹೆಸರನ್ನು ‘ಡೆಮಾಕ್ರಟಿಕ್‌ ಆಜಾದ್‌ ಪಕ್ಷ’ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಹೊಸ ಪಕ್ಷದ ಹೆಸರನ್ನು ಇಡುವುದು ಕಷ್ಟದ ಕೆಲಸ, ಸುಮಾರು 1,500ಕ್ಕೂ ಹೆಚ್ಚು ಹೆಸರುಗಳನ್ನು ಜನ ಹೆಸರಿಸಿದ್ದರು ಎಂದು ಈ ವೇಳೆ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮೂರು ಬಣ್ಣಗಳಿರುವ ಪಕ್ಷದ ಬಾವುಟವನ್ನು ಸಹ ಅವರು ಬಿಡುಗಡೆ ಮಾಡಿದರು. ಸಾಸಿವೆ – ಬಿಳಿ – ನೀಲಿ ಬಣ್ಣಗಳನ್ನು ಈ ಬಾವುಟ ಹೊಂದಿದೆ.
ಸಾಸಿವೆ ಬಣ್ಣ ಕ್ರಿಯಾಶೀಲತೆ ಮತ್ತು ವಿವಿಧತೆಯಲ್ಲಿನ ಏಕತೆಯನ್ನು ಬಿಂಬಿಸುತ್ತದೆ, ಬಿಳಿ ಶಾಂತಿಯನ್ನು ಮತ್ತು ನೀಲಿ ಸ್ವತಂತ್ರದ ಧ್ಯೋತಕವಾಗಿದೆ. ಮುಕ್ತ ವೇದಿಕೆ, ಕಲ್ಪನೆ ಮತ್ತು ಸಮುದ್ರದ ಆಳದಿಂದ ಆಕಾಶದ ಎತ್ತರದಷ್ಟು ಸ್ವೇಚ್ಚೆಯನ್ನು ನೀಡುವುದೇ ಪಕ್ಷದ ಗುರಿ ಎಂದು ಆಜಾದ್‌ ಹೇಳಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ತಾರಾ ಚಾಂದ್‌ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್‌ನ ಹಲವಾರು ಹಿರಿಯ ನಾಯಕರು ಆಜಾದ್‌ ಅವರ ಬೆಂಬಲಕ್ಕಾಗಿ ಪಕ್ಷ ತೊರೆದು ಈಗಾಗಲೇ ಕೈಜೋಡಿಸಿದ್ದಾರೆ. ಇಬ್ಬರು ಮಾಜಿ ಶಾಸಕರು, ಪಿಡಿಪಿ ಪಕ್ಷದ ಒಬ್ಬ ಶಾಸಕ ಮತ್ತು ಅಪ್ನಿ ಪಕ್ಷದ ಒಬ್ಬ ಶಾಸಕ ಸಹ ಗುಲಾಂ ನಬಿ ಆಜಾದ್‌ರ ಪಕ್ಷ ಸೇರಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಅಧಿಕಾರ ಸಿಗುವಂತೆ ಮಾಡುವುದು ಮತ್ತು ಭೂಮಿ, ನೌಕರಿ ಸ್ಥಳೀಯರಿಗೆ ಮತ್ತೆ ಸಿಗುವಂತೆ ಮಾಡುವುದೇ ತಮ್ಮ ಪಕ್ಷದ ಗುರಿ ಎಂದು ಗುಲಾಂ ನಬಿ ಆಜಾದ್‌ ಈ ಹಿಂದೆಯೇ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!