ರೈತರಿಗೆ ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬ: ಸಹಕಾರ ಭಾರತಿ ಆಕ್ರೋಶ

ಹೊಸದಿಗಂತ ವರದಿ ಮಡಿಕೇರಿ:

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ‌ ಬೆಳೆ ನಾಶವಾಗಿದ್ದರೂ,ರೈತರಿಗೆ ಪರಿಹಾರ ವಿತರಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಎನ್.ಎ.ರವಿಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪರಿಹಾರ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದೆ. ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಬೆಳೆ ಹಾನಿಗೊಳಗಾದ‌ ರೈತರಿಗೆ ಪರಿಹಾರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಯವರಿಗೆ ಮುಖ್ಯಮಂತ್ರಿಗಳು ಸಾಉಚನೆ ನೀಡಿದ್ದಾರೆ.

ಆದರೆ ಕೊಡಗು ಜಿಲ್ಲೆಯನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ಪರಿಹಾರ ಕಾರ್ಯ ಚುರುಕುಗೊಂಡು ರೈತರ ಖಾತೆಗೆ ಪರಿಹಾರ ಮೊತ್ತವೂ ಜಮೆಯಾಗಿದೆ.ಆದರೂ ಕೊಡಗು ಜಿಲ್ಲೆಯಲ್ಲಿ ಇನ್ನೂ ಸಮೀಕ್ಷೆ ಕಾರ್ಯವೇ ಮುಗಿದಿಲ್ಲ ಎಂದು ರವಿ ಬಸಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬೆಳೆಗಾರರು ನಷ್ಟ ಅನುಭವಿಸಿ ಆರ್ಥಿಕ ತೊಂದರೆಯಲ್ಲಿದ್ದಾರೆ. ಹಿಂದೆ ಕಾರ್ಯ ನಿರ್ವಹಿಸಿದ ಎಲ್ಲಾ ಜಿಲ್ಲಾಧಿಕಾರಿಗಳು ಸರಿಯಾದ ಸಮಯಕ್ಕೆ ಬೆಳೆ ಪರಿಹಾರ ಕಾರ್ಯವನ್ನು ಆರಂಭಿಸಿ ರೈತರಿಗೆ ಸೂಕ್ತ ಅಮಯದಲ್ಲಿ ಪರಿಹಾರ ಒದಗಿಸಿ ಕೊಟ್ಟಿದ್ದಾರೆ. ಆದರೆ ಈಗಿನ ಜಿಲ್ಲಾಧಿಕಾರಿಯವರು ಈ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರುಗಳು ಈ ಬಗ್ಗೆ ಸೂಚನೆ ನೀಡಿದ್ದರೂ ಜಿಲ್ಲಾಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ ಅಗತ್ಯ ಕ್ರಮ ಕೈಗೊಂಡು ನಷ್ಟಕ್ಕೊಳಗಾದವರಿಗೆ ಬೆಳೆ ಪರಿಹಾರ ಒದಗಿಸಿ ಕೊಡಬೇಕೆಂದು ಅವರು ರವಿ ಬಸಪ್ಪ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!