ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ಅನುಮತಿ ಪಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಬೆಂಗಳೂರು ಮೆಟ್ರೋ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದರು.

ಮೆಟ್ರೋ ಮೂರನೇ ಹಂತಕ್ಕೆ ಅನುಮತಿ ಕೋರಿಕೆ
ಸಭೆಯಲ್ಲಿ ಬೆಂಗಳೂರು ಮೆಟ್ರೋ ಮೂರನೇ ಹಂತದ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. 44.65 ಕಿಲೋಮೀಟರ್ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಸುಮಾರು ₹9,700 ಕೋಟಿ ವೆಚ್ಚದ ಈ ಯೋಜನೆಯನ್ನು ಕರ್ನಾಟಕ ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ. ಆದರೆ ಬಿಎಂಆರ್‌ಸಿಎಲ್ ಮಂಡಳಿ ಕೆಲವು ತಾಂತ್ರಿಕ ಬದಲಾವಣೆಗಳನ್ನು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ, ಕಾಮಗಾರಿ ಆರಂಭಿಸಲು ಅಗತ್ಯ ಅನುಮತಿ ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿದರು.
ಮೆಟ್ರೋ ಎರಡನೇ ಹಂತದ ವೆಚ್ಚ ಪರಿಷ್ಕರಣೆಗೆ ಒಪ್ಪಿಗೆ ಬೇಡಿಕೆ
ಬೆಂಗಳೂರು ಮೆಟ್ರೋ ಎರಡನೇ ಹಂತದ ಯೋಜನೆಯ ಪರಿಷ್ಕೃತ ವೆಚ್ಚಕ್ಕೂ ಕೇಂದ್ರದ ಅನುಮತಿ ಕೋರಲಾಗಿದೆ. 72.095 ಕಿಲೋಮೀಟರ್ ಉದ್ದ ಹಾಗೂ 61 ನಿಲ್ದಾಣಗಳನ್ನು ಒಳಗೊಂಡಿರುವ ಈ ಯೋಜನೆಗೆ ಆರಂಭದಲ್ಲಿ ₹26,405.14 ಕೋಟಿ ವೆಚ್ಚ ನಿಗದಿಯಾಗಿತ್ತು. ಆದರೆ ವಿವಿಧ ಕಾರಣಗಳಿಂದ ಯೋಜನಾ ವೆಚ್ಚ ಈಗ ₹40,425.02 ಕೋಟಿಗೆ ಏರಿಕೆಯಾಗಿದೆ. ಹೆಚ್ಚುವರಿ ₹14,019.88 ಕೋಟಿ ವೆಚ್ಚಕ್ಕೆ ಕೇಂದ್ರ ಸರ್ಕಾರ ಶೀಘ್ರ ಅನುಮೋದನೆ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಸರ್ಜಾಪುರ–ಹೆಬ್ಬಾಳ ಮೆಟ್ರೋ ಮಾರ್ಗಕ್ಕೆ ಶೀಘ್ರ ಅನುಮತಿ
ಮೆಟ್ರೋ ಮೂರನೇ ಎ ಹಂತದ ಸರ್ಜಾಪುರ–ಹೆಬ್ಬಾಳ ಮಾರ್ಗಕ್ಕೂ ತ್ವರಿತ ಅನುಮತಿ ನೀಡುವಂತೆ ಮುಖ್ಯಮಂತ್ರಿ ಒತ್ತಾಯಿಸಿದರು. 37.804 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ 14.28 ಕಿಲೋಮೀಟರ್ ಸುರಂಗ ಮಾರ್ಗ ಹಾಗೂ 23.524 ಕಿಲೋಮೀಟರ್ ಮೇಲ್ಸೇತುವೆ ಭಾಗವಿದೆ. ಕೇಂದ್ರ ಸರ್ಕಾರದ ಸೂಚನೆಗಳಂತೆ ಪರಿಷ್ಕರಿಸಲಾದ ₹25,999 ಕೋಟಿ ವೆಚ್ಚದ ಡಿಪಿಆರ್ ಈಗಾಗಲೇ ಸಲ್ಲಿಕೆಯಾಗಿದ್ದು, ಶೀಘ್ರ ಅನುಮೋದನೆ ದೊರೆತರೆ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದೆ.



