ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಆರ್ಥಿಕ ನೆರವು ಹಾಗೂ ಸುರಕ್ಷಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರವು ಮಹತ್ವದ ‘ಪ್ರಿಯದರ್ಶಿನಿ’ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ತಿರುವನಂತಪುರಂನ ತಂಪನೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ಈ ಯೋಜನೆಗೆ ಹಸಿರು ನಿಶಾನೆ ತೋರಿದರು.
ವಿಶೇಷವೆಂದರೆ, ಉದ್ಘಾಟನಾ ಪ್ರಯಾಣದ ಬಸ್ ಅನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದು, ಸಿಎಂ ಸೇರಿದಂತೆ ಹಲವು ಗಣ್ಯರು ಇದರಲ್ಲಿ ಭಾಗವಹಿಸಿದ್ದರು.
3,125 KSRTC ಬಸ್‌ಗಳಲ್ಲಿ ಉಚಿತ ಪ್ರಯಾಣ!
ಈ ಯೋಜನೆಯಡಿ ಮಹಿಳೆಯರು ಹಾಗೂ ತೃತೀಯಲಿಂಗಿಗಳು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ರಾಜ್ಯಾದ್ಯಂತ ಒಟ್ಟು 3,125 ಬಸ್‌ಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ.
ಯಾವೆಲ್ಲಾ ಬಸ್‌ಗಳು ಲಭ್ಯ?
ಸಾಮಾನ್ಯ, ಸಿಟಿ ಆರ್ಡಿನರಿ, ಲಿಮಿಟೆಡ್ ಸ್ಟಾಪ್, ಟೌನ್ ಟು ಟೌನ್, ಪಾಯಿಂಟ್ ಟು ಪಾಯಿಂಟ್ ಹಾಗೂ ಗ್ರಾಮವಂಡಿ ಸೇರಿದಂತೆ ಒಟ್ಟು 7 ವಿಭಾಗದ ಬಸ್‌ಗಳಲ್ಲಿ ಈ ಸೌಲಭ್ಯ ಸಿಗಲಿದೆ. ಉಚಿತ ಪ್ರಯಾಣದ ಬಸ್‌ಗಳನ್ನು ಸುಲಭವಾಗಿ ಗುರುತಿಸಲು ಅವುಗಳ ಮೇಲೆ ವಿಶೇಷ ಸ್ಟಿಕ್ಕರ್ ಅಳವಡಿಸಲಾಗಿದೆ.
ಇದು ದಾನವಲ್ಲ, ಮಹಿಳಾ ಸಬಲೀಕರಣ: ಸಿಎಂ ಸತೀಶನ್
“ಇದು ಮಹಿಳೆಯರಿಗೆ ನೀಡುತ್ತಿರುವ ದಾನವಲ್ಲ, ಬದಲಿಗೆ ಅವರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಯೋಜನೆ” ಎಂದು ಮುಖ್ಯಮಂತ್ರಿ ವಿ.ಡಿ.ಸತೀಶನ್ ತಿಳಿಸಿದ್ದಾರೆ. ಈ ಯೋಜನೆಯು ರಾಜ್ಯದ ಮಹಿಳೆಯರ ಮತ್ತು ತೃತೀಯಲಿಂಗಿಗಳ ಸಬಲೀಕರಣಕ್ಕೆ ದೊಡ್ಡ ಹೆಜ್ಜೆಯಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.



