ಇಂದು ನೂತನ ಸಂಸತ್ ಭವನ ಲೋಕಾರ್ಪಣೆ: ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸಚಿವರು, ಧಾರ್ಮಿಕ ಮುಖಂಡರು ಮತ್ತು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ನೂತನ ಸಂಸತ್ ಕಟ್ಟಡ ಉದ್ಘಾಟನಾ ಸಮಾರಂಭವು ಮುಂಜಾನೆ ಹವನ ಮತ್ತು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಔಪಚಾರಿಕ ಉದ್ಘಾಟನೆ ಕಾರ್ಯ ನಿರ್ವಹಿಸಲಿದ್ದಾರೆ.

ಸಂಸತ್‌ ಉದ್ಘಾಟನೆಯ ಉದ್ಘಾಟನಾ ಸಮಾರಂಭವನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಒಂದು ದಿನದ ಕಾರ್ಯಕ್ರಮವನ್ನು ಯೋಜಿಸಲಾಗಿದೆ.
ಇಂದು ಬೆಳಗ್ಗೆ 7 ಗಂಟೆಗೆ ಹೊಸ ಸಂಸತ್ ಕಟ್ಟಡದ ಹೊರಗೆ ಹವನ ನಡೆಯಲಿದೆ. ಬೆಳಿಗ್ಗೆ 9 ಗಂಟೆಯವರೆಗೆ ಪೂಜೆಗಳು ನಡೆಯಲಿದ್ದು, ನಂತರ ಉದ್ಘಾಟನಾ ಸಮಾರಂಭವು ಮಧ್ಯಾಹ್ನದ ಸುಮಾರಿಗೆ ಪ್ರಾರಂಭವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಉಪ ಸಭಾಪತಿ ಹರಿವಂಶ್ ಮತ್ತು ಇತರ ಕೆಲವು ಉನ್ನತ ಅಧಿಕಾರಿಗಳು ಬೆಳಗಿನ ಪೂಜೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಇಂದಿನ ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ:

  • ಬೆಳಗ್ಗೆ 7.30ಕ್ಕೆ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಹವನ ಹಾಗೂ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪ ಸಭಾಪತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.
  • ಪೂಜೆಯ ನಂತರ ಲೋಕಸಭೆಯ ಒಳಗೆ ಬೆಳಗ್ಗೆ 8.30 ರಿಂದ 9 ರವರೆಗೆ ಸೆಂಗೋಲ್ ಪ್ರತಿಷ್ಠಾಪನೆ ನಡೆಯಲಿದೆ. ನೂತನ ಸಂಸತ್ ಭವನದಲ್ಲಿ ಸ್ಪೀಕರ್ ಆಸನದ ಪಕ್ಕದಲ್ಲಿರುವ ಗಾಜಿನ ಪೆಟ್ಟಿಗೆಯಲ್ಲಿ ಐತಿಹಾಸಿಕ ರಾಜದಂಡವನ್ನು ಅಳವಡಿಸಲಾಗುವುದು.
  • ‘ಅಧೀನಂ’ (ತಮಿಳುನಾಡಿನ ಶೈವ ಮಠಗಳ ಪುರೋಹಿತರು), ಐತಿಹಾಸಿಕ ಸೆಂಗೋಲ್ ತಯಾರಿಕೆಯಲ್ಲಿ ಶ್ರಮಿಸಿದ ವುಮ್ಮಿಡಿ ಚಿನ್ನಾಭರಣ ವ್ಯಾಪಾರಿಗಳು ಮತ್ತು ನೂತನ ಸಂಸತ್ ಭವನವನ್ನು ನಿರ್ಮಿಸಿದವರನ್ನು ಸನ್ಮಾನಿಸಲಾಗುವುದು.
  • ಬೆಳಗ್ಗೆ 9.30ಕ್ಕೆ ಪಂಡಿತರು, ಸಾಧುಗಳು ಭಾಗವಹಿಸುವ ಪ್ರಾರ್ಥನಾ ಸಭೆ ನಡೆಯಲಿದೆ.
  • ಮಧ್ಯಾಹ್ನ 12 ಗಂಟೆಗೆ ರಾಷ್ಟ್ರಗೀತೆ ಹಾಡುವುದರೊಂದಿಗೆ ಎರಡನೇ ಹಂತದ ಕಾರ್ಯಕ್ರಮ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಎರಡು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು.
  • ರಾಜ್ಯಸಭಾ ಉಪಾಧ್ಯಕ್ಷರು ಸ್ವಾಗತ ಭಾಷಣ ಮಾಡುವರು. ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು ಸಂದೇಶ ನೀಡಲಿದ್ದಾರೆ.
  • ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಲಿದ್ದಾರೆ.
  • ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಷಣ ಮಾಡಲಿದ್ದು, ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಲಾಗುವುದು.
  • ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಭಾಷಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!