April 27, 2026
Monday, April 27, 2026
spot_img

ಸಂಚಾರ ದಟ್ಟಣೆಗೆ ಬ್ರೇಕ್ ಹಾಕಲು ಹೊಸ ಪ್ಲಾನ್: ರೆಡಿ ಆಗ್ತಿದೆ ಬೆಂಗಳೂರು ಪೊಲೀಸರ ‘ಟ್ರಾಫಿಕ್ ಬ್ಲೂಪ್ರಿಂಟ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಸಂಚಾರ ದಟ್ಟಣೆ ಎದುರಿಸುವ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಬೆನ್ನಲ್ಲೇ, ಇದೀಗ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ. ಟ್ರಾಫಿಕ್ ಸಮಸ್ಯೆಯಿಂದ ನಗರಕ್ಕೆ ಬಂದಿರುವ ಕೆಟ್ಟ ಹೆಸರು ಕಡಿಮೆ ಮಾಡಲು, ಬೆಂಗಳೂರು ಸಂಚಾರಿ ಪೊಲೀಸರು ಸಮಗ್ರ ಯೋಜನೆ ರೂಪಿಸಿದ್ದಾರೆ.

ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ನಡೆಸಿದ ಅಧ್ಯಯನದಲ್ಲಿ, ನಗರದ ಪೂರ್ವ ವಲಯದಲ್ಲಿ ಪೀಕ್ ಅವರ್‌ಗಳಲ್ಲಿ ಭಾರೀ ಟ್ರಾಫಿಕ್ ಉಂಟಾಗುತ್ತಿರುವುದು ಪತ್ತೆಯಾಗಿದೆ. ಕೆ.ಆರ್.ಪುರಂನಿಂದ ಇಬ್ಲೂರುವರೆಗೆ ಇರುವ ಸುಮಾರು 17 ಕಿಲೋಮೀಟರ್ ವ್ಯಾಪ್ತಿಯಲ್ಲಿ ದಿನಕ್ಕೆ 2.5 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಈ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಐಟಿ-ಬಿಟಿ ಕಂಪನಿಗಳು ಇರುವುದೇ ದಟ್ಟಣೆಗೆ ಪ್ರಮುಖ ಕಾರಣವೆಂದು ಗುರುತಿಸಲಾಗಿದೆ.

ಈ ಹಿನ್ನೆಲೆ, ಐಟಿ-ಬಿಟಿ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಸಿಬ್ಬಂದಿಗೆ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೋತ್ಸಾಹಿಸುವ ಮೂಲಕ ಸಂಚಾರ ದಟ್ಟಣೆಯನ್ನು 15 ರಿಂದ 20 ಶೇಕಡಾ ಕಡಿಮೆ ಮಾಡಬಹುದು ಎಂಬ ಅಂದಾಜು ಇದೆ. ಸಾರ್ವಜನಿಕ ಸಾರಿಗೆ ಲಭ್ಯತೆಯಲ್ಲಿ ತೊಂದರೆ ಉಂಟಾದರೆ, ಕಂಪನಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವ ಯೋಚನೆಯೂ ಪೊಲೀಸ್ ಇಲಾಖೆಯಲ್ಲಿದೆ.

ಇದಲ್ಲದೆ, ಮಧ್ಯಾಹ್ನ ಪೀಕ್ ಅವರ್‌ನಲ್ಲಿ ರಸ್ತೆಗಿಳಿಯುವ ಸಾವಿರಾರು ಆನ್‌ಲೈನ್ ಡೆಲಿವರಿ ಸಿಬ್ಬಂದಿಯಿಂದ ಉಂಟಾಗುವ ಗೊಂದಲ ತಗ್ಗಿಸಲು, ಗೂಗಲ್ ಮ್ಯಾಪ್ ಬಳಕೆಗೆ ಸಂಬಂಧಿಸಿದಂತೆ ತಂತ್ರಜ್ಞಾನ ಕಂಪನಿಗಳೊಂದಿಗೆ ಚರ್ಚೆ ನಡೆಸುವ ಯೋಜನೆಯೂ ರೂಪಿಸಲಾಗಿದೆ. ಈ ಎಲ್ಲ ಪ್ರಯತ್ನಗಳು ಎಷ್ಟರ ಮಟ್ಟಿಗೆ ಫಲ ನೀಡುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !