ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭಿಕ್ಷೆ ಬೇಡಿದ್ದರು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯೊಂದು ಜಾಗತಿಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿರುವ ಬೆನ್ನಿಗೇ ಮೆಲೋನಿ, ಖಡಕ್ ತಿರುಗೇಟು ನೀಡಿದ್ದಾರೆ.
ನಾನು ಅಲ್ಲ, ಇಟಲಿ ಕೂಡಾ ಜಗತ್ತಿನ ಯಾರ ಮುಂದೆಯೂ ಭಿಕ್ಷೆ ಬೇಡುವುದಿಲ್ಲ ಎಂದು ಗುಡುಗಿರುವ ಮೆಲೋನಿ, ಟ್ರಂಪ್ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಏನಿದು ವಿವಾದ?
ಜಿ-7 ಶೃಂಗಸಭೆಯ ಬಳಿಕ ನಡೆದ ಸಂದರ್ಶನವೊಂದರಲ್ಲಿ ಟ್ರಂಪ್, ಮೆಲೋನಿ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದರು. ಅವರು ಕೇಳಿದ್ದರಿಂದ ನಾನು ಒಪ್ಪಿಕೊಂಡೆ ಎಂಬ ಅರ್ಥದ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸಖತ್ ವೈರಲ್ ಆಗಿತ್ತು. ಈ ಹೇಳಿಕೆ ಇಟಲಿಯಲ್ಲಿ ಕೂಡ ರಾಜಕೀಯ ಸಂಚಲನ ಉಂಟುಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಟ್ರಂಪ್ ಮತ್ತು ಮೆಲೋನಿ ಕುರಿತ ಚರ್ಚೆಗಳು ತಾರಕಕ್ಕೆ ಏರಿತ್ತು. ಇದರ ಬೆನ್ನಿಗೇ ಮೆಲೋನಿ ಖಡಕ್ ಉತ್ತರ ನೀಡಿದ್ದಾರೆ.
ಇದನ್ನೂ ಓದಿ:
ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮೆಲೋನಿ, ಇದು ಸತ್ಯಕ್ಕೆ ದೂರವಾದ ಹೇಳಿಕೆ. ನಾನು ಯಾರ ಬಳಿಯೂ ಬೇಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಇಟಲಿಯೂ ತನ್ನ ಗೌರವವನ್ನು ಕಾಪಾಡಿಕೊಳ್ಳುವ ದೇಶ ಎಂದು ಹೇಳಿದ್ದಾರೆ. ಈ ಪ್ರತಿಕ್ರಿಯೆ ಇಟಲಿಯಲ್ಲಿ ಭಾರೀ ಬೆಂಬಲ ಪಡೆದುಕೊಂಡಿದ್ದು, ಆಡಳಿತ ಮತ್ತು ಪ್ರತಿಪಕ್ಷದ ಹಲವಾರು ನಾಯಕರು ಕೂಡ ಮೆಲೋನಿ ಪರ ನಿಂತಿದ್ದಾರೆ.



