October 9, 2026
Friday, October 9, 2026
spot_img

ನಾಡಹಬ್ಬ ಮೈಸೂರು ದಸರಾಗೆ ಶುಭಾರಂಭ: ಸಡಗರದ ‘ಗಜಪಯಣ’ಕ್ಕೆ ಅಧಿಕೃತ ಚಾಲನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವೈಭವದ ದಿನಗಳು ಹತ್ತಿರವಾಗುತ್ತಿದ್ದು, ಆಚರಣೆಯ ಮೊದಲ ಹಂತವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರಣಹೊಸಹಳ್ಳಿ ಗೇಟ್ ಬಳಿ ಬುಧವಾರ ‘ಗಜಪಯಣ’ ಕಾರ್ಯಕ್ರಮವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.

ಮಂಗಳವಾದ್ಯಗಳ ಮಧುರ ಧ್ವನಿ ಹಾಗೂ ಬಿಗಿ ರಕ್ಷಣೆಯ ನಡುವೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಸ್.ಯತೀಂದ್ರ ಅವರು ಶುಭ ತುಲಾ ಲಗ್ನದಲ್ಲಿ ಬೆಳಿಗ್ಗೆ 10:09ಕ್ಕೆ ಗಜಪಡೆಗೆ ಶಾಸ್ತ್ರೋಕ್ತ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು. ಇದರೊಂದಿಗೆ ಈ ಬಾರಿಯ ಮೈಸೂರು ದಸರಾ ಸಿದ್ಧತೆಗಳು ಅಧಿಕೃತವಾಗಿ ಆರಂಭಗೊಂಡವು.

ಆನೆಗಳಿಗೆ ಚಕ್ಕುಲಿ-ಕಜ್ಜಾಯ ನೈವೇದ್ಯ!

ಪೂಜೆಯ ನಂತರ ಆನೆಗಳಿಗೆ ಬೆಲ್ಲ, ಬಾಳೆಹಣ್ಣು, ಕಬ್ಬು ಮಾತ್ರವಲ್ಲದೆ, ಕರಾವಳಿ-ಮೈಸೂರು ಶೈಲಿಯ ಕಜ್ಜಾಯ, ಚಕ್ಕುಲಿ, ಕರ್ಜಿ ಕಾಯಿ ಹಾಗೂ ರವೆ ಉಂಡೆಯಂತಹ ರುಚಿರುಚಿಯಾದ ಸಿಹಿ ತಿಂಡಿಗಳನ್ನು ಉಣಿಸಲಾಯಿತು.

ಮುಂಚೂಣಿಯಲ್ಲಿ ಅಭಿಮನ್ಯು ಪಡೆ!

ಈ ಬಾರಿಯ ದಸರಾ ಮಹೋತ್ಸವಕ್ಕಾಗಿ ಒಟ್ಟು 12 ಆನೆಗಳನ್ನು ಅಂತಿಮಗೊಳಿಸಲಾಗಿದ್ದು, ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿನತ್ತ ಪಯಣ ಬೆಳೆಸಿವೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದುಬಾರೆ ಶಿಬಿರದ ಧನಂಜಯ, ಗೋಪಿ, ಶ್ರೀರಾಮ, ಶ್ರೀಕಂಠ, ಪ್ರಶಾಂತ ಮತ್ತು ಕಾವೇರಿ. ಬಳ್ಳೆ ಶಿಬಿರದ ಮಹೇಂದ್ರ ಮತ್ತು ಲಕ್ಷ್ಮಿ. ಹಾಗೂ ಮತ್ತಿಗೋಡು ಶಿಬಿರದ ಏಕಲವ್ಯ ಆನೆಗಳು ಇಂದು ಪೂಜೆಯಲ್ಲಿ ಪಾಲ್ಗೊಂಡಿದ್ದವು.

ಇಂದಿನ ಗಜಪಯಣದೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಕಳೆ ಕಟ್ಟಿದ್ದು, ಆನೆಗಳು ಮೈಸೂರಿಗೆ ತಲುಪಿದ ನಂತರ ಅವುಗಳಿಗೆ ವಿಶೇಷ ತರಬೇತಿ ಹಾಗೂ ಪೌಷ್ಟಿಕ ಆಹಾರ ನೀಡುವ ಪ್ರಕ್ರಿಯೆ ಆರಂಭವಾಗಲಿದೆ.

Must Read