ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾದಿಂದ ತತ್ತರಿಸಿದ ಇಡೀ ಜಗಟ್ಟಿಗೆ ಇದೀಗ ಮತ್ತೊಂದು ವೈರಸ್ ನ ಆತಂಕ ಶುರುವಾಗಿದೆ.
ಚೀನಾದಲ್ಲಿ ಇದೀಗ ಹೊಸ ವೈರಸ್ ಮತ್ತೆ ಪತ್ತೆಯಾಗಿದ್ದು, ಎಲ್ಲರೂ ಶಾಕ್ ಆಗುವಂತೆ ಮಾಡಿದೆ. ಇತ್ತ ಹೊಸ ವೈರಸ್ ಆತಂಕ ಬೆನ್ನಲ್ಲೇ ಸದ್ಯ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ ಐಎಲ್ಐ, ಸಾರಿ ಕೇಸ್‌ಗಳು ಕಂಡುಬಂದರೆ ಟೆಸ್ಟಿಂಗ್ ಮಾಡುವಂತೆ ಸಲಹೆ ನೀಡಿದೆ.
ಚೀನಾ ದೇಶದಲ್ಲಿ ಹೊಸ ವೈರಸ್ ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ಮಾಡಿದ್ದಾರೆ.
ಈ ಕುರಿತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಪ್ರತಿಕ್ರಿಯಿಸಿದ್ದು, ಐಎಲ್ಐ, ಸಾರಿ ಕೇಸ್‌ಗಳು ಕಂಡುಬಂದರೆ ಟೆಸ್ಟಿಂಗ್ ಮಾಡುವಂತೆ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ ಕೇಂದ್ರಸರ್ಕಾರ ಸೂಚನೆ ನೀಡಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸೀಸನ್‌ನಲ್ಲಿ ವೈರಸ್ ಹೆಚ್ಚಾಗಿ ಬರುತ್ತದೆ. ವೈರಸ್ ಹೆಚ್ಚಾಗುವುದರಿಂದ ಉಸಿರಾಟದ ಸಮಸ್ಯೆ ಆಗುತ್ತೆ. ಜ್ವರ, ಕೆಮ್ಮಿನಿಂದ ಬಳಲುವವರು ಮಾಸ್ಕ್ ಹಾಕುವಂತೆ ಸಲಹೆ ನೀಡಿದ್ದಾರೆ.
ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಡಾ.ಅತುಲ್ ಗೋಯೆಲ್ ಮಾತನಾಡಿ, ಮೆಟಾಪ್ನ್ಯೂಮೋವೈರಸ್ ಸಾಮಾನ್ಯ ಶೀತವನ್ನು ಉಂಟುಮಾಡುವ ವೈರಸ್. ತುಂಬಾ ವಯಸ್ಸಾದ ಮತ್ತು ಚಿಕ್ಕವರಲ್ಲಿ ಜ್ವರ ಬರಬಹುದು. ಹೊಸ ವೈರಸ್ ಬಗ್ಗೆ ಗಾಬರಿಬೀಳುವ ಅಗತ್ಯವೇನು ಇಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಉಸಿರಾಟದ ಸಮಸ್ಯೆಯ ರೋಗಿಗಳ ಡೇಟಾ ವಿಶ್ಲೇಷಿಸಿದ್ದೇವೆ. 2024ರ ಡೇಟಾದಲ್ಲಿ ಅಂತಹ ಗಣನೀಯ ಹೆಚ್ಚಳವಿಲ್ಲ. ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳು ಸಾಮಾನ್ಯವಾಗಿ ಹೆಚ್ಚಾದರೆ. ನಮ್ಮ ಆಸ್ಪತ್ರೆಗಳು ಅಗತ್ಯವಿರುವ ಹಾಸಿಗೆಗಳೊಂದಿಗೆ ಸಂಪೂರ್ಣ ಸಿದ್ಧವಾಗಿವೆ. ಸಾಮಾನ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ನಾನು ವಿನಂತಿಸುತ್ತೇನೆ. ಕೆಮ್ಮು, ನೆಗಡಿ ಇರೋರು ಇತರರೊಂದಿಗೆ ಸಂಪರ್ಕಕ್ಕೆ ಬರದಂತೆ ತಡೆಯಬೇಕು. ಶೀತ ಮತ್ತು ಜ್ವರಕ್ಕೆ ಶಿಫಾರಸು ಮಾಡಲಾದ ಸಾಮಾನ್ಯ ಔಷಧಿ ತೆಗೆದುಕೊಳ್ಳಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಗಾಬರಿಪಡಬೇಕಾಗಿಲ್ಲ ಎಂದಿದ್ದಾರೆ.