Thursday, July 7, 2022

Latest Posts

ಹೊಸದಿಗಂತ ವರದಿಗಾರ ಮಿಥುನ ಕೊಡೆತ್ತೂರು ಅವರಿಗೆ ಪ.ಗೋ. ಪ್ರಶಸ್ತಿ

ಹೊಸದಿಗಂತ ವರದಿ, ಮಂಗಳೂರು:
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪ.ಗೋ. ಪ್ರಶಸ್ತಿಗೆ ಹೊಸದಿಗಂತ ಕನ್ನಡ ದೈನಿಕದ ಮುಲ್ಕಿ- ಕಿನ್ನಿಗೋಳಿ ವರದಿಗಾರ ಮಿಥುನ ಕೊಡೆತ್ತೂರು ಆಯ್ಕೆಯಾಗಿದ್ದಾರೆ.
ಮಿಥುನ ಕೊಡೆತ್ತೂರು ಅವರ ವಿಶೇಷ ವರದಿ ‘ಈಗ ಕೈಮಗ್ಗಗಳತ್ತ ಪದವೀಧರರ ಚಿತ್ತ… ಸೀರೆಗಳಲ್ಲಿ ನೇಕಾರರ ಚಿತ್ರ!’ 2021ರ ಜುಲೈ 22ರಂದು ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಪತ್ರಿಕೋದ್ಯಮ ಉಪನ್ಯಾಸಕಿ ಸ್ಮಿತಾ ಶೆಣೈ ಮತ್ತು ಮಂಗಳೂರು ವಿವಿ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಗುರುಪ್ರಸಾದ್ ಟಿ.ಎನ್. ಅವರನ್ನೊಳಗೊಂಡ ಆಯ್ಕೆ ಸಮಿತಿಯು ಮಿಥುನ ಕೊಡೆತ್ತೂರು ಅವರ ವರದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು 10.001 ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿವೆ.
 ಪರಿಚಯ:
ಮಿಥುನ ಕೊಡೆತ್ತೂರು ಅವರು, ಹೊಸದಿಗಂತ ದೈನಿಕದಲ್ಲಿ 23 ವರುಷಗಳಿಂದ ಬಿಡಿ ಸುದ್ದಿ ಸಂಗ್ರಹಕಾರರಾಗಿ, ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ 12 ವರುಷಗಳ ಕಾಲ ವರದಿಗಾರರಾಗಿ, ಅನಂತ ಪ್ರಕಾಶ ಮಾಸಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾನವೀಯ, ಸಾಮಾಜಿಕ ಕಳಕಳಿ ಮತ್ತು ತನಿಖಾವರದಿಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ದಿ ಪತ್ರಿಕೋದ್ಯಮದ ಭಾಗವಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ:
ಪ್ರಶಸ್ತಿ ಪ್ರದಾನ ಸಮಾರಂಭ ಮೇ 31ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆಯಲಿದೆ. ಪೊಲೀಸ್ ಉಪ ಆಯುಕ್ತ ಹರಿರಾಮ್ ಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸುವರು.
ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಹಿರಿಯ ಪತ್ರಕರ್ತ ಆನಂದ ಶೆಟ್ಟಿ ಮುಖ್ಯ ಆತಿಥಿಗಳಾಗಿ ಭಾಗವಹಿಸುವರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ. ಆರ್., ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ ಭಾಗವಹಿಸುವರು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss