ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ರೈಲು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನವದಂಪತಿ ಶುಕ್ರವಾರ ಕಟಕ್‌ನ ಶ್ರೀ ರಾಮಚಂದ್ರ ಭಂಜಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮತ್ತೆ ಭೇಟಿಯಾದರು. ಹೌರಾ ನಿವಾಸಿಗಳಾದ ಮೊಹಮ್ಮದ್ ರಫೀಕ್ ಮತ್ತು ದೀಪಿಕಾ ಪಾಲಿ ದುರಂತಕ್ಕೂ ಮೂರು ದಿನಗಳ ಹಿಂದೆ ವಿವಾಹವಾಗಿದ್ದರು. ನವ ವಿವಾಹಿತ ದಂಪತಿ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಉಂಟಾದ ಅಪಘಾತದಲ್ಲಿ ಗಾಯಗಳಿಂದಾಗಿ ಆಸ್ಪತ್ರೆ ಪಾಲಾಗಿದ್ದರು.
ಗಂಭೀರವಾಗಿ ಗಾಯಗೊಂಡ ನವವಿವಾಹಿತರನ್ನು ಪ್ರತ್ಯೇಕವಾಗಿ ಕಟಕ್ ಎಸ್‌ಸಿಬಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ಮೊಹಮ್ಮದ್ ರಫೀಕ್ ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಅವರನ್ನು ಟ್ರಾಮಾ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದ್ದು, ರಫೀಕ್ ಅವರ ಪತ್ನಿ ದೀಪಿಕಾ ಪಾಲಿ ಅವರನ್ನು ಪತಿ ದಾಖಲಾಗಿದ್ದ ಅದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಯಿತು.
“ನನಗಿಂತ ನನ್ನ ಪತಿಗೆ ಹೆಚ್ಚು ಗಾಯಗಳಾಗಿವೆ. ಅವರ ಜೊತೆಗೆ ನನ್ನನ್ನು ಸೇರಿಸಲು ನಾನು ಅಧಿಕಾರಿಗಳನ್ನು ವಿನಂತಿಸಿದೆ, ಆದರೆ ಅವರು ನಮ್ಮನ್ನು ಬೇರೆ ಬೇರೆ ವಾರ್ಡ್‌ಗಳಲ್ಲಿ ಸೇರಿಸಿದರು” ಎಂದು ದೀಪಿಕಾ ಪಾಲಿ ಹೇಳಿದರು. ಇದೀಗ ಎಲ್ಲಾ ಅಡೆತಡೆಗಳನ್ನು ಮೀರಿ ದಂಪತಿ ಮತ್ತೆ ಭೇಟಿಯಾಗಿದ್ದಾರೆ.