Tuesday, March 28, 2023

Latest Posts

ನವ ವಿವಾಹಿತೆಯ ಕೊಲೆ ಶಂಕೆ: ಮೂವರ ವಿರುದ್ಧ ದೂರು ದಾಖಲು

ಹೊಸದಿಗಂತ ವರದಿ, ಕುಶಾಲನಗರ:

ಇತ್ತೀಚೆಗೆ ಪ್ರೀತಿಸಿ ವಿವಾಹವಾಗಿದ್ದ ಯುವತಿ ಮೃತಪಟ್ಟಿದ್ದು ಮೃತಳ ಪತಿ ಹಾಗೂ ಆತನ ಪೋಷಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಹೆಬ್ಬಾಲೆ ಗ್ರಾ.ಪಂ ವ್ಯಾಪ್ತಿಯ 6ನೇ ಹೊಸಕೋಟೆ ಗ್ರಾಮದ ರಾಜು ಎಂಬವರ ಪುತ್ರಿ ಅಕ್ಷಿತಾ (18) ಹಾಗೂ ಅದೇ ಗ್ರಾಮದ ದಶರಥ ಹಾಗೂ ಗಿರಿಜಾ ದಂಪತಿಯ ಪುತ್ರ ಹೇಮಂತ್ ಪರಸ್ಪರ ಪ್ರೀತಿಸುತ್ತಿದ್ದರಲ್ಲದೆ, ಕಳೆದ‌ ಮೂರು ದಿನಗಳ ಹಿಂದೆ ದೇವಸ್ಥಾನಕ್ಕೆ ತೆರಳಿ ವಿವಾಹವಾಗಿದ್ದರು.
ಬಳಿಕ ಇಬ್ಬರೂ ಹೇಮಂತ್ ಮನೆಗೆ ಆಗಮಿಸಿದ್ದು, ಮಂಗಳವಾರ ವಿವಾಹಿತೆ ಅಕ್ಷಿತಾ ದಿಢೀರನೆ ಮೃತಪಟ್ಟಿದ್ದಾಳೆ ಎಂದು ಆಕೆಯ ಪತಿ ಹೇಮಂತ್ ಮೃತಳ ಮನೆಯವರಿಗೆ ಮಾಹಿತಿ ನೀಡಿದ್ದಾನೆ. ಮನೆಯವರು ಪರಿಶೀಲನೆ ನಡೆಸಿದ ಸಂದರ್ಭ ಮೃತಳ ಹೊಟ್ಟೆಯ ಕೆಳಭಾಗದಿಂದ ತೀವ್ರ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿದ್ದು, ಇದು ಸಹಜ ಸಾವಲ್ಲ, ಕೊಲೆ ಎಂದು ಆರೋಪಿಸಿರುವ ಮೃತಳ ತಂದೆ ರಾಜು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪತಿ ಹೇಮಂತ್, ಮಾವ ದಶರಥ ಹಾಗೂ ಅತ್ತೆ ಗಿರಿಜಾ ವಿರುದ್ದ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಸಮ್ಮುಖದಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಳ ಮರಣೋತ್ತರ ಪರೀಕ್ಷೆ ನಡೆಸಿ ಹೆಚ್ಚಿನ ಪರೀಕ್ಷೆಗೆ ಮೃತದೇಹವನ್ನು ಮಡಿಕೇರಿಗೆ ರವಾನಿಸಲಾಗಿದೆ.
ಕುಶಾಲನಗರ ಗ್ರಾಮಾಂತರ ಪೊಲೀಸರು ಮೂವರ ವಿರುದ್ದ ಕೊಲೆ ಆರೋಪ, ಜಾತಿ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಇತ್ತ ಮೃತೆ ಅಕ್ಷಿತಾಳ‌ ಪತಿ ಹೇಮಂತ್ ಕೂಡಾ ಮಂಗಳವಾರ ರಾತ್ರಿ ವಿಷ ಸೇವಿಸಿದ ಹಿನ್ನಲೆಯಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ರವಾನಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!