ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪ್ರತಿದಿನ ನೀವು ಕೈಗೆತ್ತಿಕೊಳ್ಳುವ ದಿನಪತ್ರಿಕೆಗೆ ನೀವು ಕೊಡುವ ಮುಖಬೆಲೆ ಯಾವ ಮೂಲೆಗೂ ಸಾಕಾಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗೆಂದೇ ವೃತ್ತಪತ್ರಿಕೆ ಉದ್ಯಮ ಜಾಹೀರಾತು ಹಾಗೂ ಸರ್ಕಾರದ ಸಬ್ಸಿಡಿ ನ್ಯೂಸ್ ಪ್ರಿಂಟ್ ಇವೆಲ್ಲದರ ಮೇಲೆ ಬಹಳವಾಗಿ ಅವಲಂಬಿತವಾಗಿದೆ.
ಈ ನ್ಯೂಸ್ ಪ್ರಿಂಟ್ ವಿಭಾಗದಲ್ಲಿ ಬೆಲೆ ಏರಿಕೆ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಅತಿಯಾಗಿತ್ತು. ಉದಾಹರಣೆಗೆ, 2019ರಲ್ಲಿ ಟನ್ನಿಗೆ 450 ಡಾಲರುಗಳಿದ್ದ ನ್ಯೂಸ್ ಪ್ರಿಂಟ್ ಈಗ 950 ಡಾಲರುಗಳಿಗೆ ಏರಿಕೆ ಕಂಡಿದೆ.
ಹೀಗೆ ಮೊದಲೇ ಸಂಕಷ್ಟದಲ್ಲಿದ್ದ ಪರಿಸ್ಥಿತಿಗೆ ರಷ್ಯ-ಉಕ್ರೇನ್ ಕದನ ತುಪ್ಪ ಸುರಿದಿದೆ. ಭಾರತಕ್ಕೆ ಆಮದಾಗುವ ನ್ಯೂಸ್ ಪ್ರಿಂಟ್ ಪೈಕಿ ಶೇ. 45ರಷ್ಟು ರಷ್ಯದಿಂದಲೇ ಬರುವಂಥದ್ದು. ರಷ್ಯವೇನೋ ಈಗಲೂ ಬೇಡಿಕೆ ಪೂರೈಸುವಷ್ಟು ಶಕ್ತವಾಗಿದೆ. ಆದರೆ ಈ ನ್ಯೂಸ್ ಪ್ರಿಂಟ್ ಗಳನ್ನು ರಷ್ಯ ಬಂದರಿನಿಂದ ನಮ್ಮಲ್ಲಿಗೆ ತರುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಂಥವು ಹೆಚ್ಚಿನವು ಜಾಗತಿಕ ಶಿಪ್ಪಿಂಗ್ ಕಂಪನಿಗಳೇ ಆಗಿದ್ದವು. ಇದೀಗ ಪಾಶ್ಚಾತ್ಯ ನಿರ್ಬಂಧ, ಡಾಲರ್ ವಿನಿಮಯಕ್ಕಿರುವ ತಡೆ ಇವೆಲ್ಲವುಗಳಿಂದ ರಷ್ಯ ಸಂಬಂಧಿತ ಎಲ್ಲ ವ್ಯವಹಾರಗಳಿಂದ ಇವು ನಿರ್ಗಮಿಸುತ್ತಿವೆ. ಹೀಗಾಗಿ ನ್ಯೂಸ್ ಪ್ರಿಂಟ್ ಸಾಗಣೆಗೆ ಸೇವೆ ಕೊಡುವುದನ್ನು ಇವು ನಿಲ್ಲಿಸುತ್ತಿವೆ.
ಇನ್ನು, ಉಳಿದಿದ್ದರಲ್ಲಿ 40 ಶೇಕಡದಷ್ಟು ನ್ಯೂಸ್ ಪ್ರಿಂಟ್ ಆಮದಾಗುವುದು ಕೆನಡಾದಿಂದ. ಅಲ್ಲೂ ಟ್ರಕ್ ಚಾಲಕರ ಮುಷ್ಕರದಿಂದಾಗಿ ಪೂರೈಕೆ ಸರಪಳಿ ಕುಸಿದುಬಿದ್ದಿದೆ.
ಹಾಗಾದರೆ ಭಾರತದಲ್ಲಿ ನ್ಯೂಸ್ ಪ್ರಿಂಟ್ ತಯಾರಿಕೆಯ ಆತ್ಮನಿರ್ಭರತೆ ಇಲ್ಲವೇ? ಭಾರತದಲ್ಲಿರುವ ಅನೇಕ ಮಿಲ್ ಗಳು ತಮ್ಮನ್ನು ತಾವು ಪ್ಯಾಕೇಜಿಂಗ್ ಇಂಡಸ್ಟ್ರಿಗೆ ಬೇಕಾಗುವಂತೆ ಪರಿವರ್ತಿಸಿಕೊಂಡುಬಿಟ್ಟಿವೆ. ಏಕೆಂದರೆ ಭಾರತದಲ್ಲಿ ಇ-ಕಾಮರ್ಸ್ ಇತ್ತೀಚಿನ ವರ್ಷಗಳಲ್ಲಿ ಹಾಗೆ ಬೆಳೆದಿದ್ದು, ನ್ಯೂಸ್ ಪ್ರಿಂಟ್ ರಗಳೆಗಿಂತ ಆ ವ್ಯವಹಾರವೇ ಆಕರ್ಷಕ. ಅಲ್ಲದೇ, ನ್ಯೂಸ್ ಪ್ರಿಂಟ್ ತಯಾರಿಕೆಯಲ್ಲಿ ಬೇಕಾಗುವ ಪುನರ್ನವೀಕೃತ ಫೈಬರ್ ಕಚ್ಚಾವಸ್ತು ಸಹ ಸಿಗುವುದು ಕಷ್ಟವಾಗಿರುವುದರಿಂದ ನ್ಯೂಸ್ ಪ್ರಿಂಟ್ ತಯಾರಿಕೆ ಉದ್ಯಮದಿಂದ ಎಲ್ಲರೂ ವಿಮುಖರಾಗಿದ್ದಾರೆ.
ಕೋವಿಡ್ ಬಂದಾಗಲೇ ಮುದ್ರಿತ ಪತ್ರಿಕೆಗಳ ಆರ್ಥಿಕತೆ ನೆಲಕಚ್ಚಿಹೋಗಿತ್ತು. ಇದೀಗ ಜಗತ್ತಿನಲ್ಲಿ ಆಗುತ್ತಿರುವ ಯಾವ ಬೆಳವಣಿಗೆಗಳೂ ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿದೆ ಎಂಬ ಭರವಸೆಯನ್ನು ಹೇಳುತ್ತಿಲ್ಲ.