May 26, 2026
Tuesday, May 26, 2026
spot_img

ಮಂಗಳೂರು ಸ್ಮಾರ್ಟ್ ಸಿಟಿಗೆ ಎನ್‌ಜಿಟಿ ಚಾಟಿ: ಬೋಳಾರ ಹೊಳೆ ತೀರದ ಸೈಕಲ್ ಪಥಕ್ಕೆ ‘ಸಿಆರ್‌ಝೆಡ್ ನಿಯಮ’ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನ ಬೋಳಾರದ ಹೊಳೆ ತೀರದಲ್ಲಿ ಸೈಕಲ್ ಪಥ ನಿರ್ಮಾಣ ಅನುಷ್ಠಾನಕ್ಕೆ ಈಗ ಕಾನೂನಿನ ವಿಘ್ನ ಎದುರಾಗಿದೆ.

ಇಲ್ಲಿ ನಿಯಮಗಳನ್ನು ಮೀರಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಸೈಕಲ್ ಪಥ ನಿರ್ಮಾಣವಾಗುತ್ತಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಎನ್‌ಇಸಿಎಫ್) ಚೆನ್ನೈನ ಹಸಿರು ಪೀಠದಲ್ಲಿ ಹೂಡಿರುವ ದಾವೆಯ ಅಂತಿಮ ಆದೇಶ ಈಗ ಹೊರಬಿದ್ದಿದ್ದು, ಅದರಂತೆ ನೇತ್ರಾವತಿ ನದಿ ದಂಡೆ, ಜಪ್ಪಿನಮೊಗರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಎಲ್ಲಾ ಶಾಶ್ವತ ಕಾಂಕ್ರೀಟ್ ರಚನೆಗಳನ್ನು ಕೆಡವಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಂಗಳವಾರ ಆದೇಶದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಎನ್‌ಇಸಿಎಫ್‌ನ ಅಧ್ಯಕ್ಷ ಜೋನಸ್ ಡಿಸೋಜಾ, ಸೈಕಲ್ ಪಥ ಕಾಮಗಾರಿಗೆ ಸಂಬಂಧಿಸಿ ತನ್ನ ಅಂತಿಮ ಆದೇಶದಲ್ಲಿ 2011ರ ಸಿಆರ್‌ಝೆಡ್ ನಿಯಮಗಳನ್ನು ಪಾಲಿಸುವಂತೆ ಎನ್‌ಜಿಟಿ ಸೂಚಿಸಿದೆ. ಯೋಜನೆ ಕೈಗೆತ್ತಿಕೊಂಡಿರುವ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಇದರನ್ವಯ ಕಡ್ಡಾಯವಾಗಿ ಎಲ್ಲಾ ನಿಯಮವನ್ನು ಪಾಲಿಸಬೇಕಾಗುತ್ತದೆ ಎಂದರು.

ಸೈಕಲ್ ಟ್ರ್ಯಾಕ್ ನಿರ್ಮಾಣ 2011ರ ಸಿಆರ್‌ಝೆಡ್ ನಿಯಮ ಪ್ರಕಾರ ನಿಷೇಧಿತ ಕಾಮಗಾರಿಯಾಗಿದೆ. ಹಾಗಾಗಿ ಯೋಜನೆಯನ್ನು ರದ್ದುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಚೆನ್ನೈನ ಹಸಿರುಪೀಠದ ಆದೇಶದ ಮೇರೆಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ 15 ದಿನಗಳಲ್ಲಿ ಕ್ರಮ ಆಗದಿದ್ದರೆ ಆದೇಶ ಅನುಷ್ಟಾನವಾಗದೇ ಇರುವ ಕುರಿತು ಎನ್‌ಜಿಟಿಯಲ್ಲಿ ಮತ್ತೆ ದೂರು ದಾಖಲಿಸಲಾಗುವುದು. ಇದಲ್ಲದೆ ನಿಗಧಿತ ಅವಧಿಯಲ್ಲಿ ಈ ಯೋಜನೆ, ಕಾಮಗಾರಿ ರದ್ದುಗೊಳಿಸದಿದ್ದಲ್ಲಿ ಹಸಿರು ಪೀಠಕ್ಕೆ ಮೇಲ್ಮನವಿ ಸಲ್ಲಿಸುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು.

ಎನ್‌ಇಸಿಎಫ್ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಮಾತನಾಡಿ, ಸೈಕಲ್ ಪಥ ಕಾಮಗಾರಿಯ ಕುರಿತಂತೆ ತಮ್ಮ ಸಂಘಟನೆಯು ಚೆನ್ನೈಯ ರಾಷ್ಟ್ರೀಯ ಹಸಿರು ಪೀಠದಲ್ಲಿ ದಾಖಲಿಸಿರುವ ದೂರಿಗೆ ಸಂಬಂಧಿಸಿ ಅಂತಿಮ ಆದೇಶ ನೀಡಲಾಗಿದೆ. ಇದೀಗ ನಿಯಮದಂತೆ ನೇತ್ರಾವತಿ ನದಿ ದಂಡೆ ಮತ್ತು ಜಪ್ಪಿನಮೊಗರು ಗ್ರಾಮದಲ್ಲಿ ನಿರ್ಮಿಸಲಾಗಿರುವಎಲ್ಲಾ ಶಾಶ್ವತ ಕಾಂಕ್ರೀಟ್ ರಚನೆಗಳನ್ನು ಕೆಡವಬೇಕಿದೆ ಎಂದರು.

ಈ ಭಾಗದಲ್ಲಿ ಈಗಾಗಲೇ ಸಿಆರ್‌ಝೆಡ್ ನಿಯಮವನ್ನು ಉಲ್ಲಂಘಿಸಿ ಶೌಚಾಲಯ ಬ್ಲಾಕ್, ಆಹಾರ ಕಿಯೋಸ್ಕ್, ಟಿಕೆಟ್ ಕೌಂಟರ್ ನಿರ್ಮಾಣವಾಗಿದೆ. ಇಲ್ಲಿ ಮ್ಯಾಂಗ್ರೋವ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಕತ್ತರಿಸಲಾಗಿದೆ ಎಂದು ಅವರು ಇದೇ ಸಂದರ್ಭ ಆರೋಪಿಸಿದರು.
ಎನ್‌ಇಸಿಎಫ್ ಸದಸ್ಯ ಬೆನೆಡಿಕ್ಟ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !