ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಸಮೀಪದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭೀಕರ ಬಂಡೆ ಕುಸಿತ ದುರಂತ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಏಳು ಕಾರ್ಮಿಕರು ಮೃತಪಟ್ಟ ಪ್ರಕರಣವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸ್ವಯಂಪ್ರೇರಿತವಾಗಿ ಪರಿಗಣಿಸಿ, ಘಟನೆಯ ಕುರಿತು ಎರಡು ವಾರಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಸುರಕ್ಷತಾ ಕ್ರಮಗಳ ಪರಿಶೀಲನೆ
ಅಪಘಾತದ ವೇಳೆ ಹಲವು ಕಾರ್ಮಿಕರು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂಡೆ ಏಕಾಏಕಿ ಕುಸಿದ ಪರಿಣಾಮ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಐವರು ಗಾಯಗೊಂಡಿದ್ದರು. ಘಟನೆಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ, ನಿರ್ಲಕ್ಷ್ಯ ನಡೆದಿತ್ತೇ ಎಂಬ ಅಂಶಗಳ ಬಗ್ಗೆ ಆಯೋಗ ಮಾಹಿತಿ ಕೋರಿದೆ.
ಇದನ್ನೂ ಓದಿ:
ಪರಿಹಾರ ಹಾಗೂ ತನಿಖೆ ಕುರಿತು ವಿವರ ಕೇಳಿದ ಆಯೋಗ
ಮೃತರ ಕುಟುಂಬಗಳಿಗೆ ನೀಡಿರುವ ಪರಿಹಾರ, ಗಾಯಾಳುಗಳಿಗೆ ಒದಗಿಸಿರುವ ಚಿಕಿತ್ಸೆ, ಅಪಘಾತದ ಕಾರಣಗಳು ಹಾಗೂ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುರಕ್ಷತಾ ಲೋಪಗಳ ಬಗ್ಗೆ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.



