ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ಶೇಖ್ ಅಬ್ದುಲ್ ರಶೀದ್ ಗೆ ಪ್ರಮಾಣವಚನಕ್ಕೆ NIA ಸಮ್ಮತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ ರಶೀದ್ ಗೆ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಲು ಎನ್‌ಐಎ ಅನುಮತಿ ನೀಡಿದೆ.

ಭಯೋತ್ಪಾದಕರಿಗೆ ಹಣಕಾಸಿನ ನೆರವು ಒದಗಿಸಿದ ಆರೋಪ ಎದುರಿಸುತ್ತಿರುವ ಶೇಖ್ ಅಬ್ದುಲ್ ರಶೀದ್ ಜು. 25ರಂದು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಬಗ್ಗೆ ದಿಲ್ಲಿ ಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ಚಂದರ್‌ ಜಿತ್‌ ಸಿಂಗ್‌ ಆದೇಶ ಹೊರಡಿಸಲಿದ್ದಾರೆ.

ಜೈಲಿನಲ್ಲಿರುವ ಕಾರಣ ಜೂ.24ರಂದು ನಡೆದ ಪ್ರಮಾಣವಚನ ಸ್ವೀಕಾರ ಸಭಾರಂಭದಲ್ಲಿ ರಶೀದ್‌ಗೆ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಮಾಣವಚನಕ್ಕೆ ಅವಕಾಶ ಕಲ್ಪಿಸುವಂತೆ ಆತ ಕೋರ್ಟ್‌ ಮೊರೆ ಹೋಗಿದ್ದು, ಇದಕ್ಕೆ ಪ್ರತಿಕ್ರಿಯಿಸುವಂತೆ ಕೋರ್ಟ್‌ ಹೇಳಿತ್ತು. 2017 ರ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಬಂಧಿತರಾಗಿರುವ ಬಾರಾಮುಲ್ಲಾ ಸಂಸದ ರಶೀದ್ ಅವರು ಪ್ರಮಾಣ ವಚನ ಸ್ವೀಕರಿಸಲು ಮತ್ತು ಸಂಸತ್ತಿನ ಕಾರ್ಯಗಳನ್ನು ನಿರ್ವಹಿಸಲು ಮಧ್ಯಂತರ ಜಾಮೀನು ಅಥವಾ ಪರ್ಯಾಯವಾಗಿ ಕಸ್ಟಡಿ ಪೆರೋಲ್ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದನು.

ಇದೀಗ ಎನ್‌ಐಎ ಅನುಮತಿ ನೀಡಿದ್ದು, ಸೋಮವಾರ, ಎನ್‌ಐಎ ಪರ ವಕೀಲರು ರಶೀದ್ ಪ್ರಮಾಣ ವಚನ ಸ್ವೀಕಾರವು ಮಾಧ್ಯಮಗಳೊಂದಿಗೆ ಮಾತನಾಡದಂತಹ ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿದರು. ಒಂದು ದಿನದೊಳಗೆ ರಶೀದ್ ಎಲ್ಲವನ್ನೂ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.

ಶೇಖ್ ಅಬ್ದುಲ್ ರಶೀದ್?
ಇಂಜಿನಿಯರ್ ರಶೀದ್ ಪ್ರಸ್ತುತ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ, ಎರಡು ಬಾರಿ ಶಾಸಕನಾಗಿದ್ದ ರಶೀದ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2019 ರಲ್ಲಿ ಭಯೋತ್ಪಾದನೆ-ಧನಸಹಾಯ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಆತ ನ್ಯಾಷನಲ್‌ ಕಾನ್ಫರೆನ್ಸ್‌ನ ಓಮರ್‌ ಅಬ್ದುಲ್ಲಾ ವಿರುದ್ಧ ಸ್ಪರ್ಧಿಸಿ 4,7,2481 ಮತಗಳನ್ನು ಗಳಿಸಿದ್ದಾನೆ. ಒಮ್ಮೆಯೂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡದ ರಶೀದ್ 2,04,142 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!