ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಫ್ ಹೆಲ್ಮೆಟ್ ನಿಷೇಧಿಸುವಂತೆ ನಿಮ್ಹಾನ್ಸ್ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ರಾಜಧಾನಿಯಲ್ಲಿ ದಿನೇ ದಿನ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹಾಫ್ ಹೆಲ್ಮೆಟ್‌ನಿಂದ ತಲೆ ಭಾಗ ಸುರಕ್ಷಿತವಾಗಿ ಇರುವುದಿಲ್ಲ. ಪೊಲೀಸರು ಹಾಗೂ ನಿಮ್ಹಾನ್ಸ್ ಜಂಟಿ ಸರ್ವೇ ನಡೆಸಿದೆ. ಒಂದು ಲಕ್ಷಕ್ಕೂ ಹೆಚ್ಚು ಬೈಕ್ ಸವಾರರ ಸರ್ವೇ ನಡೆಸಿದ್ದು, ಹೆಲ್ಮೆಟ್ ಇದ್ದರೆ ಪ್ರಾಣ ಉಳಿಯುತ್ತಿತ್ತು ಎನ್ನುವ ಸುಮಾರು ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನ 15 ಪ್ರಮುಖ ಏರಿಯಾಗಳಲ್ಲಿ ಶೇ. 26ರಷ್ಟು ಮಂದಿ ಹಾಫ್ ಹೆಲ್ಮೆಟ್ ಬಳಸುತ್ತಾರೆ. ಇನ್ನು ಹಿಂದೆ ಕೂರುವ ಶೇ.70ರಷ್ಟು ಮಂದಿ ಮಾತ್ರ ಹೆಲ್ಮೆಟ್ ಬಳಸುತ್ತಾರೆ ಎನ್ನಲಾಗಿದೆ. ಹಾಫ್ ಹೆಲ್ಮೆಟ್ ಧರಿಸಿದ ವೇಳೆ ಅಪಘಾತಕ್ಕೀಡಾದರೆ ತಲೆಗೆ ಹೆಚ್ಚು ಪೆಟ್ಟಾಗುವ ಸಾಧ್ಯತೆ ಇದೆ. ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆವರೆಗೆ ಬೆಂಗಳೂರಿನಾದ್ಯಂತ ವಾಹನ ಸವಾರರ ಹೆಲ್ಮೆಟ್ ವೀಕ್ಷಣೆ ಸರ್ವೇ ತಂಡ ಮಾಡಿದ್ದು, ಹಿಂದಿಗಿಂತ ಈಗ ಶೇ.90ರಷ್ಟು ಮಂದಿ ಹೆಲ್ಮೆಟ್ ಬಳಕೆ ಮಾಡುತ್ತಾರೆ. ಕೆಲವರು ತಮ್ಮ ಸುರಕ್ಷತೆಗೆ ಅಲ್ಲದಿದ್ದರೂ, ಪೊಲೀಸರ ಫೈನ್ ಭಯಕ್ಕೆ ಹೆಲ್ಮೆಟ್ ಧರಿಸುತ್ತಿದ್ದಾರೆ ಎನ್ನುವ ಮಾಹಿತಿಯೂ ಹೊರಬಂದಿದೆ.