ನಿರಾಣಿ ಜಪಾನ್‌ ಭೇಟಿ: ಜಪಾನ್‌ ಕಂಪನಿಗಳಿಗೆ ಕರ್ನಾಟಕಕ್ಕೆ ಆಹ್ವಾನವಿತ್ತ ಕೈಗಾರಿಕಾ ಸಚಿವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್ ನಿರಾಣಿಯವರ ಜಪಾನ್‌ ಪ್ರವಾಸವು ಯಶಸ್ವಿಯಾಗಿದ್ದು ಹಲವಾರು ಕಂಪನಿಗಳಿಗೆ ಕರ್ನಾಟಕಕ್ಕೆ ಬರಲು ಆಹ್ವಾನಿಸಲಾಗಿದೆ. ನವೆಂಬರ್‌ 2 ರಿಂದ 4ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಜಪಾನ್ ಕಂಪನಿಗಳಿಗೆ ಆಮಂತ್ರಣ ನೀಡಲಾಗಿದೆ.

ವಿವಿಧ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ ನಿರಾಣಿಯವರು ರಾಜ್ಯದಲ್ಲಿ ಹೂಡಿಕೆ ಮಾಡಲು ವಿಫುಲ ಅವಕಾಶಗಳಿದ್ದು ಕಂಪನಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಟೋಕಿಯೋ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿರುವ ನಿರಾಣಿಯವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಫುಲ ಅವಕಾಶಗಳನ್ನು ಮನವರಿಕೆ ಮಾಡಿ ಕೊಟ್ಟಿದ್ದಾರೆ. ವಿವಿಧ ಕಂಪನಿಗಳು ಹಾಗೂ ಅದರ ಮುಖ್ಯಸ್ಥರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತಿರುವ ನಿರಾಣಿಯವರು ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಸಾಸಿರುವ ಪ್ರಗತಿಯ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ರಕ್ಷಣೆ, ಆಹಾರ ಸಂಸ್ಕರಣೆ, ಬಾಹ್ಯಾಕಾಶ, ಐಟಿಬಿಟಿ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಬಂಡವಾಳ ಹೂಡುವ ಉದ್ಯಮಿಗಳಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲಿದೆ ಎಂದು ಭರವಸೆ ನೀಡಿದ ಸಚಿವರು ಕರ್ನಾಟಕ ಸರ್ಕಾರ ಕೈಗಾರಿಕೆಗಳ ಬೆಳವಣಿಗೆ ಮತ್ತು ಉತ್ತೇಜನಕ್ಕೆ ಜಾರಿ ಮಾಡಿರುವ 2020-25ರ ಕೈಗಾರಿಕಾ ನೀತಿ ಇಡೀ ದೇಶಕ್ಕೆ ಮಾದರಿಯಾಗಿದ್ದು, ವಿಶ್ವದ ಮುಂಚೂಣಿಯಲ್ಲಿರುವ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ದೇಶದ ಒಟ್ಟಾರೆ ವಿದೇಶಿ ಹೂಡಿಕೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.42ರಷ್ಟಿದೆ. ಬೆಂಗಳೂರು ಮಾತ್ರವಲ್ಲದೆ 2ನೇ ಹಂತದ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಲಬುರಗಿ ಹಾಗೂ 3ನೇ ಹಂತದ ನಗರಗಳಾದ ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಬಾಗಲಕೋಟೆ ಸೇರಿದಂತೆ ಎಲ್ಲಾ ಕಡೆ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಉದ್ಯಮಿಗಳಿಗೆ ನಮ್ಮ ಸರ್ಕಾರ ಸದಾ ಬೆಂಗಾವಲಿಗೆ ಇರುತ್ತದೆ ಎಂಬ ಆಶ್ವಾಸನೆಯನ್ನು ಈ ವೇಳೆ ನೀಡಲಾಗಿದೆ

ತಮ್ಮ ಜಪಾನ್‌ ಪ್ರವಾಸದ ಭಾಗವಾಗಿ ಸಚಿವರು ಈ ಕೆಳಗಿನ ಕಂಪನಿಗಳನ್ನು ಭೇಟಿ ಮಾಡಿದ್ದಾರೆ

ಟೊಯೊಟಾ: ಬಹುರಾಷ್ಟ್ರೀಯ ವಾಹನ ತಯಾರಿಕಾ ಸಂಸ್ಥೆಯಾದ ಟೊಯೊಟಾ ವರ್ಷಕ್ಕೆ ಸುಮಾರು 10 ಮಿಲಿಯನ್ ವಾಹನಗಳನ್ನು ಉತ್ಪಾದಿಸುತ್ತದೆ. ಟೊಯೋಟಾ ಇಂಡಸ್ಟ್ರೀಸ್, ಟೊಯೋಟಾ ಮೋಟಾರ್, ಮತ್ತು ಐಚಿ ಸ್ಟೀಲ್, ಟೊಯೊಟಾ ಆಟೋ ಬಾಡಿ, ಟೊಯೊಟಾ ಬೊಶೋಕು, ಟೊಯೊಟಾ ಸೆಂಟ್ರಲ್ ಆರ್ & ಡಿ, ಮತ್ತು ಟೊಯೊಟಾ ಹೌಸಿಂಗ್ ಕಾರ್ಪೊರೇಷನ್‌ ಮುಂತಾದ 17 ಪ್ರಮುಖ ಕಂಪನಿಗಳನ್ನು ಹೊಂದಿದೆ. ಟೊಯೊಟಾ ಗ್ರೂಪ್‌ನ ಗ್ಲೋಬಲ್ ಎಕ್ಸ್‌ಟರ್ನಲ್ ಅಫೇರ್ಸ್ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಸೌರಿ ತ್ಸುಚಿಯಾ ಹಾಗೂ ಗ್ರೂಪ್‌ ಮ್ಯಾನೇಜರ್‌ ತಕಾಕಾ ಕುಬೋ ಅವರನ್ನು ನಿರಾಣಿ ನೇತೃತ್ವದ ನಿಯೋಗ ಭೇಟಿ ಮಾಡಿದೆ.

ಮೆರ್ಕರಿ: ಇದು ಜಪಾನಿನ ಪ್ರಮುಖ ಇ-ಕಾಮರ್ಸ್ ಕಂಪನಿಯಾಗಿದ್ದು, ಇದರ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ವೇಗವಾಗಿ ವಸ್ತುಗಳ ಖರೀದಿ ಮತ್ತು ಮಾರಾಟ ಮಾಡಬಹುದಾಗಿದೆ. ಇದಲ್ಲದೇ, ಕ್ರಿಪ್ಟೋ-ಅಸ್ಸೆಟ್‌ ಮತ್ತು ಬ್ಲಾಕ್‌ಚೈನ್ ವ್ಯವಹಾರ ಮತ್ತು ಲಾಜಿಸ್ಟಿಕ್ಸ್ ಸೇವೆಯನ್ನೂ ಈ ಕಂಪನಿ ಒದಗಿಸುತ್ತದೆ. ಮೆರ್ಕರಿಯ ಸಿಟಿಓ ಕೆನ್ ವಕಾಸಾ, ಮೆರ್ಕರಿ ಮಂಡಳಿ ನಿರ್ದೇಶಕರಾದ ಜುನಿಚಿ ವೋಜಾಕಿ ಅವರನ್ನು ಸಚಿವ ನಿರಾಣಿ ಭೇಟಿ ಮಾಡಿದ್ದಾರೆ.

ಸುಜುಕಿ ಮೋಟಾರ್: ಸುಜುಕಿ ಮೋಟಾರ್ ಕಾರ್ಪೊರೇಶನ್ ಜಪಾನಿನ ಪ್ರಮುಖ ಮೋಟಾರ್‌ ವಾಹನ ತಯಾರಿಕಾ ಕಂಪನಿಯಾಗಿದ್ದು ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಇಂಡಿಯಾ ಆಟೋಮೊಬೈಲ್ ಡಿಪಾರ್ಟ್ಮೆಂಟ್‌ನ ಪ್ರಧಾನ ವ್ಯವಸ್ಥಾಪಕ ಹಿಡಕಿ ತಗುಚಿ ಸೇರಿದಂತೆ ಇತರರನ್ನು ನಿರಾಣಿ ನೇತೃತ್ವದ ನಿಯೋಗ ಭೇಟಿ ಮಾಡಿದೆ.

ಮಿಟ್ಸುಯಿ: ಇದು ಜಪಾನಿನ ಅತಿ ದೊಡ್ಡ ಜನರಲ್‌ ಟ್ರೇಡಿಂಗ್‌ ಕಂಪನಿಯಾಗಿದ್ದು 63 ದೇಶಗಳಲ್ಲಿ 129 ಕಚೇರಿಗಳನ್ನು ಹೊಂದಿದೆ. ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ಇಂಧನ, ಆಹಾರ ಮತ್ತು ಕೃಷಿ, ಐಟಿ ಮತ್ತು ಸಂವಹನ ಸೇರಿದಂತೆ 16 ಉದ್ಯಮಗಳನ್ನು ಕಂಪನಿ ಹೊಂದಿದೆ.

ಹಿಟಾಚಿ: ಹಿಟಾಚಿ ಉಪಾಧ್ಯಕ್ಷ, ಪ್ರಾದೇಶಿಕ ಕಾರ್ಯತಂತ್ರಗಳ ಕಾರ್ಯನಿರ್ವಾಹಕ ಅಧಿಕಾರಿ ಕೊಜಿನ್ ನಕಾಕಿತಾ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ನೊರಿಹಿರೊ ಸುಜುಕಿ ಹಾಗೂ ಪ್ರಧಾನ ವ್ಯವಸ್ಥಾಪಕ ಅಯುಮು ಮೊರಿಟಾ ಅವರನ್ನು ರಾಜ್ಯ ನಿಯೋಗ ಭೇಟಿ ಮಾಡಿದೆ.

ಫುಜಿತ್ಸು ಲಿಮಿಟೆಡ್: ಫುಜಿತ್ಸು ಲಿಮಿಟೆಡ್‌ ಕಾರ್ಪೊರೇಟ್ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ಮಹಾಜನ್, ಕಾರ್ಪೊರೇಟ್ ಕಾರ್ಯನಿರ್ವಾಹಕ ಅಧಿಕಾರಿ ಕೆನ್ ಟೊಯೋಡಾ, ಮತ್ತು ಸಿಬ್ಬಂದಿ ಮುಖ್ಯಸ್ಥ ಜಂಗೊ ಒಕೈ ಅವರನ್ನೂ ಭೇಟಿ ಮಾಡಿ ಆಹ್ವಾನ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!