ಸೋಮವಾರದಿಂದ ಬಜೆಟ್‌ ರಚನೆ ಪ್ರಕ್ರಿಯೆ ಶುರು: ಬಜೆಟ್‌ ಪೂರ್ವ ಸಭೆ ನಡೆಸಲಿರುವ ವಿತ್ತ ಸಚಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರದಿಂದ ಬಜೆಟ್ ಪೂರ್ವ ಸಭೆಗಳನ್ನು ನಡೆಸಲಿದ್ದಾರೆ. ಮುಂದಿನ ವರ್ಷ ಮಂಡನೆಯಾಗಲಿರುವ ಈ ಬಜೆಟ್ 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚಿನ ಆದ್ಯತೆ ಹೊಂದಿದೆ. ಮೂಲಸೌಕರ್ಯ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳ ಮೇಲೆ ವಿಶೇಷ ಗಮನ ಹರಿಸುವುದರ ಮೂಲಕ ಬಜೆಟ್ ರೂಪಿಸುವ ಬಗ್ಗೆ ಚರ್ಚೆಗಳನ್ನು ನಡೆಸಲಿದ್ದಾರೆ ಎಂದು ತಿಳಿದಿದೆ.

ಸೋಮವಾರ ಉದ್ಯಮ, ಮೂಲಸೌಕರ್ಯ ಮತ್ತು ಪರಿಸರ ತಜ್ಞರೊಂದಿಗೆ ವರ್ಚುವಲ್ ಸಭೆಗಳನ್ನು ನಡೆಸುತ್ತಾರೆ. 2023-24ನೇ ಸಾಲಿನ ಬಜೆಟ್‌ ಸಿದ್ಧಪಡಿಸಲು ತಜ್ಞರಿಂದ ಸಲಹೆ ಪಡೆಯಲಾಗುವುದು. ಜೊತೆಗೆ ಇದೇ ತಿಂಗಳ 22ರಂದು ಕೃಷಿ ಸಂಬಂಧಿ ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ. 24ರಂದು ಸೇವಾ, ವಾಣಿಜ್ಯ, ವೈದ್ಯಕೀಯ, ಶಿಕ್ಷಣ, ನೀರು, ನೈರ್ಮಲ್ಯ ಮತ್ತಿತರ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗುವುದು.

ನವೆಂಬರ್ 28 ರಂದು ಕಾರ್ಮಿಕ ಸಂಘಟನೆಗಳು ಮತ್ತು ಆರ್ಥಿಕ ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ. ಮುಂದಿನ ವರ್ಷ ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ 2023-24 ರ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಮುಂದಿನ ವರ್ಷದ ಬಜೆಟ್ ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗದಂತಹ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!