ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಡಳಿತಾರೂಢ ಎನ್ಡಿಎ ಮತ್ತು ಪ್ರಬಲ ವಿಪಕ್ಷ ಇಂಡಿಯಾ ಮೈತ್ರಿಕೂಟದ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದೆ.
ಇಂದಿನಿಂದ ಆ.12ರ ವರೆಗೆ ಅಧಿವೇಶನ ನಡೆಯಲಿದೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮೀಕ್ಷಾ ವರದಿ ಮಂಡಿಸಲಿದ್ದಾರೆ. ನಾಳೆ ತಮ್ಮ ದಾಖಲೆಯ 7ನೇ ಬಜೆಟ್ ಮಂಡನೆ ಮಾಡಲಿದ್ದಾರೆ.
19 ದಿನಗಳ ಕಾಲ ನಡೆಯಲಿರುವ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ. ನೀಟ್, ನೆಟ್ ಪರೀಕ್ಷಾ ಅಕ್ರಮ, ಐಎಎಸ್ ಅಧಿಕಾರಿಗಳ ನೇಮಕಾತಿ ವಿವಾದ, ಅಗ್ನಿವೀರ್ ಯೋಜನೆ, ಮಣಿಪುರ ಹಿಂಸಾಚಾರ, ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಇಂಡಿಯಾ ಮೈತ್ರಿಕೂಟ ಸಜ್ಜಾಗಿದೆ.