ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಪವಿತ್ರಾ ಗೌಡ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.
ಜೈಲಿನಲ್ಲಿರುವ ಪವಿತ್ರಾ ಗೌಡರನ್ನು ಭೇಟಿ ಮಾಡಿ ಮಾತನಾಡಿದ್ದು, ಮಾಧ್ಯಮಗಳ ಜೊತೆ ಮಾತುಕತೆಯಲ್ಲಿ ಏನಾಯ್ತು ಎನ್ನುವ ವಿಷಯವನ್ನು ಹೇಳಿದ್ದಾರೆ. ಜೈಲಿನಲ್ಲಿರುವ ಎಲ್ಲರ ಜೊತೆ ಮಾತನಾಡಿದ್ದೇನೆ. ಅದೇ ರೀತಿ ಪವಿತ್ರಾ ಗೌಡ ಜೊತೆಯೂ ಮಾತನಾಡಿದೆ. ಅವರು ಸಂಪೂರ್ಣ ಕುಗ್ಗಿಹೋಗಿದ್ದಾರೆ. ಜೀವನದಲ್ಲಿ ಬೆಳಕು ಕಾಣದೇ ಕೈ ಕಟ್ಟಿ ಕುಳಿತಿದ್ದಾರೆ. ನನಗೆ ಪವಿತ್ರಾ ಗೌಡ ಇರಲಿ ಬೇರೆ ಹೆಣ್ಣುಮಕ್ಕಳಿರಲಿ ಎಲ್ಲರೂ ಒಂದೇ. ಎಲ್ಲರೂ ನನ್ನ ಮಕ್ಕಳಂತೆ. ನಾನು ತಾಯಿಯಂತೆ. ಜೈಲಿನಲ್ಲಿ ಇದ್ದಾರೆ ಎನ್ನುವ ಮಾತ್ರಕ್ಕೆ ಅವರು ಕೆಟ್ಟವರು ಎಂದು ಹೇಳೋಕಾಗೋದಿಲ್ಲ.
ಭಾವನಾತ್ಮಕ ಜೀವಿಗಳು ಬದುಕಿನಲ್ಲಿ ಒಮ್ಮೆ ಬಿದ್ದುಬಿಟ್ಟರೆ ಮತ್ತೆ ಮೇಲಕ್ಕೆ ಏಳುವುದು ಕಷ್ಟ. ನಾನು ಎಕ್ಸ್ಟ್ರಾ ಏನನ್ನೂ ಮಾಡಲು ಆಗುವುದಿಲ್ಲ. ಆದರೆ ಒಂದು ಹೆಣ್ಣಾಗಿ ಪ್ರೀತಿಯಿಂದ ಅಪ್ಪುಗೆ ಕೊಟ್ಟೆ. ಆಕೆ ಕಣ್ಣೀರಿಟ್ಟರು ಎಂದು ಹೇಳಿದ್ದಾರೆ. ಜೈಲಿನಲ್ಲಿರುವ ಯಾರ ಬಗ್ಗೆಯೂ ಪರ್ಸನಲ್ ಪ್ರಶ್ನೆಗಳನ್ನು ಕೇಳಬೇಡಿ. ಸಂಪೂರ್ಣ ಸತ್ಯ ಗೊತ್ತಿಲ್ಲದೆ ಕಠುವಾಗಿ ಬರೆಯಬೇಡಿ. ಜೈಲಿನಲ್ಲಿ ಆಸ್ಪತ್ರೆಯ ಸೌಲಭ್ಯವಿದೆ. ಮಹಿಳೆಯರಿಗಾಗಿ ವಿಶೇಷ ವೈದ್ಯಕೀಯ ಸೌಲಭ್ಯವಿದೆ. ಒಬ್ಬ ಮನುಷ್ಯನ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ.
ಜೈಲಿನಲ್ಲಿ ಊಟ ಕೆಟ್ಟದಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಆದರೆ ಬೇರೆ ಕಡೆಗೆ ಹೋಲಿಸಿದರೆ ಈ ಜೈಲಿನಲ್ಲಿ ಕೊಡುವ ಊಟ ಹಾಸ್ಟೆಲ್ ಊಟಕ್ಕಿಂತ ಚೆನ್ನಾಗಿಯೇ ಇದೆ. ನಾನು ಕೈದಿಗಳಿಗೆ ಕೊಡುವ ಮುದ್ದೆ ಅನ್ನ ಸಾರನ್ನು ತಿಂದಿದ್ದೇನೆ. ಚೆನ್ನಾಗಿಯೇ ಇದೆ. ಕೈದಿಗಳಿಗೆ ಓದಲು ಗ್ರಂಥಾಲಯ ಇದೆ. ಮಾನಸಿಕ ಆರೋಗ್ಯ ಸುಧಾರಣೆಗೆ ಬೇಕಾದ ವ್ಯವಸ್ಥೆಯೂ ಇದೆ ಎಂದಿದ್ದಾರೆ.



