ಕ್ರಿಕೆಟಿಗರ ಬಯೋ ಬಬಲ್‌ ಬದುಕಿಗೆ ಬೈ.. ಬೈ… ಎಂದ ಬಿಸಿಸಿಐ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೊರೋನಾ ಪ್ರಕರಣಗಳ ಗಮನಾರ್ಹ ಇಳಿಕೆ ಹಾಗೂ ಕ್ರಿಕೆಟಿಗರ ಮಾನಸಿಕ ಯೋಗಕ್ಷೇಮವನ್ನು ಗಮನದಲ್ಲಿರಿಸಿಕೊಂಡು ಬಿಸಿಸಿಐ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ- 20 ಸರಣಿಯಿಂದ ಜೈವಿಕ ಬಬಲ್‌ಗಳನ್ನು ತೆಗೆದುಹಾಕಲಿದೆ.
ಕೋವಿಡ್‌ 19 ಸಾಂಕ್ರಾಮಿಕದ ಭೀತಿಯಿಂದ ಕಳೆದ ಎರಡು ವರ್ಷಗಳಲ್ಲಿ ಬಹುತೇಕ ಎಲ್ಲಾ ಸರಣಿಗಳು ಕಟ್ಟುನಿಟ್ಟಾದ ಜೈವಿಕ-ಸುರಕ್ಷಿತ ವಾತಾವರಣದಲ್ಲಿಯೇ ನಡೆದಿವೆ. ಅದರೊಂದಿಗೆ ಬಯೋ-ಬಬಲ್ ಕ್ರಿಕೆಟಿಗರ ಜೀವನದ ಒಂದು ಭಾಗವೇ ಆಗಿಹೋಗಿದೆ. ಬಯೋಬಬಲ್‌ ಉಲ್ಲಂಘನೆಯ ಕಾರಣಕ್ಕಾಗಿಯೇ ಐಪಿಎಲ್‌ ಸೇರಿ ಅನೇಕ ಪಂದ್ಯವಳಿಗಳು ಅರ್ಧಕ್ಕೆ ನಿಂತಿದ್ದ ಉದಾಹರಣೆಗಳನ್ನೂ ಸ್ಮರಿಸಬಹುದು.
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಆತಿಥೇಯ ಭಾರತವು ಜೂನ್ 9 ರಿಂದ 19ರ ವರೆಗೆ 5 ಪಂದ್ಯಗಳ ಟಿ-20 ಸರಣಿಯಲ್ಲಿ ಸೆಣಸಾಡಲಿದೆ. ಈ ಪಂದ್ಯಗಳು ಕ್ರಮವಾಗಿ ದೆಹಲಿ, ಕಟಕ್, ವೈಜಾಗ್, ರಾಜ್‌ಕೋಟ್ ಮತ್ತು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ನಲ್ಲಿ ಆಟಗಾರರು ಮತ್ತು ಅಧಿಕಾರಿಗಳ ಸುರಕ್ಷತೆಗಾಗಿ ಏರ್ಪಡಿಸಿರುವ ಬಯೋ ಬಬಲ್‌ನಲ್ಲಿ ಮೇ 29 ರಂದು ಕೊನೆಗೊಳ್ಳಲಿದೆ. ಲೀಗ್ ಮುಕ್ತಾಯದ ನಂತರ ಬಯೋಬಬಲ್‌ ವ್ಯವಸ್ಥೆಯನ್ನು ಕೈಬಿಡಲು ಬಿಸಿಸಿಐ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪರಿಸ್ಥತಿಗಳು ನಿಯಂತ್ರಣದಲ್ಲಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಯಲ್ಲಿ ಯಾವುದೇ ಜೈವಿಕ-ಬಬಲ್ಸ್ ಮತ್ತು ಕಠಿಣ ಕ್ವಾರಂಟೈನ್ ಇರುವುದಿಲ್ಲ” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದ.ಆಫ್ರೀಕಾ ಸರಣಿ ನಂತರ ನಾವು ಐರ್ಲೆಂಡ್ ಮತ್ತು ಇಂಗ್ಲೆಂಡ್‌ ಗೆ ಸರಣಿಗಳನ್ನಾಡಲು ಪ್ರಯಾಣಿಸುತ್ತೇವೆ. ಆ ದೇಶಗಳಲ್ಲಿಯೂ ಯಾವುದೇ ಜೈವಿಕ ಗುಳ್ಳೆ(ಬಯೋಬಬಲ್) ಇರುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಧೀರ್ಘಕಾಲದವರೆಗೆ ನಿರ್ಬಂಧಿತ ಪ್ರದೇಶಗಳಲ್ಲಿರುವುದು ಆಟಗಾರರ ಮಾನಸಿಕ ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಈ ವಿಚಾರವಾಗಿ ಬಿಸಿಸಿಐ ಗಂಭೀರವಾಗಿ ಆಲೋಚಿಸಿದೆ ಎಂದು ಅವರು ತಿಳಸಿದ್ದಾರೆ.
ಆಟಗಾರರು ಒಂದರ ನಂತರ ಒಂದರಂತೆ ಬಯೋ-ಬಬಲ್ ಸರಣಿಗಳಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಈಗ ಎರಡು ತಿಂಗಳ ಐಪಿಎಲ್ ಆಟದಿಂದಾಗಿ ಮತ್ತಷ್ಟು ದಣಿದಿದ್ದಾರೆ ಎಂದು ಅವರು ಹೇಳಿದರು.
ಇಂಗ್ಲೆಂಡ್‌ ನಲ್ಲಿ ಸದ್ಯ ಯಾವುದೇ ಕ್ರೀಡಾ ಚಟುವಟಿಕೆಗಳಿಗೆ ಬಯೋ ಬಬಲ್‌ಗಳಿಲ್ಲ. ಆದ್ದರಿಂದ ಭಾರತ ತಂಡವು ಮೂರು ವಾರಗಳ ಅಂತರದಲ್ಲಿ ಒಂದು ಟೆಸ್ಟ್ ಮತ್ತು ಆರು ಒನ್‌ ಡೇ ಪಂದ್ಯಗಳನ್ನಾಡಲಿದೆ. ಈ ವೇಳೆ ಮುಕ್ತ ವಾತಾವರಣದಲ್ಲಿ ಆಟವಾಡುವುದನ್ನು ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!