ಹೊಸದಿಗಂತ ಡಿಜಿಟಲ್ ಡೆಸ್ಕ್;
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದ ಚರ ಮತ್ತು ಸ್ಥಿರಾಸ್ತಿಗಳನ್ನು ಸದ್ಯ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಸಿಂಧುತ್ವ ಪ್ರಶ್ನಿಸಿ ಮೈಸೂರು ಮಹಾರಾಜರ ಮನೆತನದ ರಾಣಿ ಪ್ರಮೋದಾದೇವಿ ಒಡೆಯರ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಕ್ಷೇತ್ರದ ಮಾಲೀಕತ್ವದ ಕುರಿತಾಗಿ ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ನ್ಯಾಯಾಲಯದಲ್ಲಿ ವಾಜ್ಯವಿದೆ. 2004ರಲ್ಲಿ ರಾಜಮನೆತನ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಬಳಿಕ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಇಂದಿಗೂ ಪೂರ್ಣಗೊಂಡಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವಾಗ ವಿಧಾನಮಂಡಲದಲ್ಲಿ ವಿಧೇಯಕ ಮಂಡಿಸಿ ಪ್ರಾಧಿಕಾರ ರಚನೆ ಮಾಡಿರುವುದು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 81 ಹಾಗೂ 161ಕ್ಕೆ ತದ್ವಿರುದ್ಧವಾಗಿದೆ. ಫೆ.19ರಂದು ವಿಧೇಯಕ ಮಂಡಿಸಿ, ಫೆ.21ಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿದೆ. ವಿಧೇಯಕದ ಬಗ್ಗೆ ಚರ್ಚೆ ನಡೆದಿಲ್ಲ. ಹಾಗಾಗಿ, ಅದರ ಸಿಂಧುತ್ವದ ಬಗ್ಗೆ ಪ್ರಶ್ನೆ ಮೂಡಿದೆ.
ಕ್ಷೇತ್ರವು ಮೈಸೂರು ರಾಜಮನೆತನದ ಖಾಸಗಿ ಆಸ್ತಿ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಪ್ರಾಧಿಕಾರ ರಚನೆಯಿಂದ ಕ್ಷೇತ್ರದ ಆಸ್ತಿಗಳು ಸರ್ಕಾರದ ಸುಪರ್ದಿಗೆ ಹೋಗಲಿದೆ. ಕ್ಷೇತ್ರದ ಧಾರ್ಮಿಕ ವಿಧಿ-ವಿಧಾನಗಳು, ಸಂಪ್ರದಾಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಲಿದೆ. ಪ್ರಾಧಿಕಾರ ರಚನೆಗೆ ಮಧ್ಯಂತರ ತಡೆ ನೀಡುವುದರ ಜತೆಗೆ ದೇವಾಲಯದ ಸಂಪ್ರದಾಯಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು. ಚರ ಮತ್ತು ಸ್ಥಿರಾಸ್ತಿಗಳಲ್ಲಿ ಬದಲಾವಣೆ ಮಾಡಬಾರದು ಎಂದು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್.ದೇವದಾಸ್ ವಾದ ಮಂಡಿಸಿ, ಸಂವಿಧಾನದ 212 ವಿಧಿಯಡಿ ಸರ್ಕಾರಕ್ಕೆ ಅಧಿಕಾರವಿದೆ. ಕಾಯ್ದೆ, ಪ್ರಾಧಿಕಾರದ ಸಿಂಧುತ್ವ ಬೇಕಿದ್ದರೆ ಅರ್ಜಿದಾರರು ಪ್ರಶ್ನಿಸಲಿ. ಆದರೆ, ವಿಧಾನಮಂಡಲದ ಪ್ರಕ್ರಿಯೆ ಪ್ರಶ್ನಿಸುವಂತಿಲ್ಲ. ಅರ್ಜಿದಾರರ ವಾದಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶಬೇಕು ಎಂದು ಕೋರಿದರು.
ವಾದ-ಪ್ರತಿ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಿತು.